ADVERTISEMENT

6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ತರಗತಿ ಅ.1ರಿಂದ ಆರಂಭ: ಬಸವರಾಜ ಬೊಮ್ಮಾಯಿ

ರಾತ್ರಿ 10ರಿಂದ ಬೆಳಿಗ್ಗೆ 5ವರೆಗೆ ಕರ್ಫ್ಯೂ: ದಸರಾ ಆಚರಣೆಗೆ ಪ್ರತ್ಯೇಕ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 23:15 IST
Last Updated 24 ಸೆಪ್ಟೆಂಬರ್ 2021, 23:15 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಶೇಕಡ 0.66ಕ್ಕೆ ಕುಸಿದಿರುವುದರಿಂದ ಅಕ್ಟೋಬರ್‌ 1ರಿಂದ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಶುಕ್ರವಾರ ಕೋವಿಡ್‌ ನಿಯಂತ್ರಣ ಕಾರ್ಯಪಡೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕೋವಿಡ್‌ ದೃಢಪ್ರಮಾಣ ದರ ಶೇ 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ವಾರದಲ್ಲಿ ಐದು ದಿನಗಳ ಕಾಲ ಆರರಿಂದ ದ್ವಿತೀಯ ಪಿಯುಸಿವರೆಗಿನ ಶೇ 100ರಷ್ಟು ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುವುದು. ಶನಿವಾರ ಮತ್ತು ಭಾನುವಾರ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು. ದೃಢಪ್ರಮಾಣ ದರ ಶೇ 1ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಈಗಿರುವಂತೆ ದಿನ ಬಿಟ್ಟು ದಿನ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಸರದಿಯ ಮೇಲೆ ತರಗತಿಗಳು ನಡೆಯಲಿವೆ’ ಎಂದರು.

ಪಬ್‌ ಆರಂಭಕ್ಕೂ ಒಪ್ಪಿಗೆ: ಅ.3ರಿಂದ ಪಬ್‌ಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಚಿತ್ರಮಂದಿರಗಳಿಗೆ ಅನ್ವಯವಾಗುವ ಮಾರ್ಗಸೂಚಿಗಳು ಪಬ್‌ಗಳಿಗೂ ಅನ್ವಯವಾಗುತ್ತವೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ADVERTISEMENT

ದಸರಾ ಹಬ್ಬಕ್ಕೆ ಸಂಬಂಧಿಸಿದಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ದಸರಾ ಆಚರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಹೇಳಿದರು.

ಯಾದಗಿರಿ, ರಾಯಚೂರು, ಕಲಬುರ್ಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ ನೀಡುವುದನ್ನು ಹೆಚ್ಚಿಸಲಾಗುವುದು. ಅಂತರ ರಾಜ್ಯ ಗಡಿ ಭಾಗದ ಜಿಲ್ಲೆಗಳಲ್ಲಿ ನಿಗಾ ವಹಿಸಲಾಗುವುದು ಎಂದರು.

ರಾತ್ರಿ ಕರ್ಫ್ಯೂ ಸಡಿಲ: ರಾತ್ರಿ ಕರ್ಫ್ಯೂ ಅವಧಿಯನ್ನು ಇನ್ನೂ ಒಂದು ಗಂಟೆ ಸಡಿಲಿಕೆ ಮಾಡಲಾಗಿದೆ.
ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಬೊಮ್ಮಾಯಿ ಹೇಳಿದರು.

ಚಿತ್ರಮಂದಿರ ಶೇ 100ರಷ್ಟು ಆಸನ ಭರ್ತಿಗೆ ಅನುಮತಿ:ಕೋವಿಡ್‌ ದೃಢಪ್ರಮಾಣ ದರ ಶೇ 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅ. 1ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ರಂಗಮಂದಿರ, ಸಭಾಂಗಣಗಳಲ್ಲಿ ಪೂರ್ಣ ಪ್ರಮಾಣದ ಆಸನಗಳನ್ನು ಭರ್ತಿಮಾಡಲು ಅನುಮತಿ ನೀಡಲಾಗಿದೆ.

ಕೋವಿಡ್‌ ದೃಢಪ್ರಮಾಣ ದರ ಶೇ 1ಕ್ಕಿಂತ ಹೆಚ್ಚಿದ್ದರೆ ಈಗ ಇರುವಂತೆ ಶೇ 50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಬೇಕು.ಶೇ 2ಕ್ಕಿಂತ ಹೆಚ್ಚು ಪ್ರಕರಣ ಕಂಡುಬಂದರೆ ಚಿತ್ರಮಂದಿರಗಳನ್ನು ಬಂದ್‌ ಮಾಡಬೇಕು ಎಂದು ಬೊಮ್ಮಾಯಿ ತಿಳಿಸಿದರು.

ಗರ್ಭಿಣಿಯರು ಮತ್ತು ಹಿರಿಯ ನಾಗರಿಕರು ಚಿತ್ರಮಂದಿರಗಳಿಗೆ ಬರಬಾರದು. ಚಿತ್ರಮಂದಿರದ ಪ್ರವೇಶ ದ್ವಾರದಲ್ಲಿ ದೇಹದ ಉಷ್ಣಾಂಶ ತಪಾಸಣೆ ನಡೆಸಬೇಕು. ಪ್ರತಿ ಪ್ರದರ್ಶನದ ಬಳಿಕ ಶೌಚಾಲಯಗಳೂ ಸೇರಿದಂತೆ ಇಡೀ ಚಿತ್ರಮಂದಿರವನ್ನು ಸ್ವಚ್ಛಗೊಳಿಸಬೇಕು ಎಂದು ಶುಕ್ರವಾರ ಹೊರಡಿಸಿರುವಕೋವಿಡ್‌ ನಿಯಂತ್ರಣ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.