ADVERTISEMENT

ಮಾರ್ಗಸೂಚಿ ಎಲ್ಲರಿಗೂ ಅನ್ವಯಿಸಲಿ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಹರಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ಮಾರ್ಗಸೂಚಿ ರೂಪಿಸಿ, ಜಾರಿಗೊಳಿಸಬಾರದು. ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ತನಗೆ ಬೇಕಾದಾಗ ಮಾರ್ಗಸೂಚಿಗಳನ್ನು ಜಾರಿಗೆ ತರುವುದು, ಬೇಡ ಆದಾಗ ಸಡಿಲಗೊಳಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಕೆಲವರಿಗೆ ಅನುಕೂಲವಾಗುವಂತೆಯೂ ಮಾರ್ಗಸೂಚಿಗಳನ್ನು ರೂಪಿಸಬಾರದು. ಆ ರೀತಿಯ ಪ್ರಯತ್ನ ಮಾಡಿದರೆ ನಾವು ಹೋರಾಟಕ್ಕೆ ಇಳಿಯುತ್ತೇವೆ’ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಒಳಿತಿಗಾಗಿ ಕಾನೂನು, ನಿಯಮಗಳನ್ನು ರೂಪಿಸಿ, ಜಾರಿಗೆ ತರಬೇಕು. ಕೆಲವರ ಹಕ್ಕುಗಳನ್ನು ಮೊಟಕುಗೊಳಿಸುವುದು ಮತ್ತು ಕೆಲವರಿಗೆ ಮುಕ್ತ ಅವಕಾಶಗಳನ್ನು ನೀಡುವುದನ್ನು ಕಾಂಗ್ರೆಸ್‌ ಒಪ್ಪುವುದಿಲ್ಲ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿಗೆ ನಿಷ್ಠರಲ್ಲ: ‘ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಪಕ್ಷನಿಷ್ಠ ಎಂದು ಹೇಳಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ತಾವು ಮುಖ್ಯಮಂತ್ರಿಗೆ ನಿಷ್ಠರಾಗಿ ಇಲ್ಲ ಎಂಬುದನ್ನು ಈಶ್ವರಪ್ಪ ಸಾಬೀತು ಮಾಡಿದ್ದಾರೆ’ ಎಂದು ಶಿವಕುಮಾರ್‌ ಟೀಕಿಸಿದರು.

ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಮುಖ್ಯಮಂತ್ರಿಯವರು ಈಶ್ವರಪ್ಪ ಅವರನ್ನು ಏಕೆ ಇನ್ನೂ ಸಂಪುಟದಿಂದ ವಜಾಗೊಳಿಸಿಲ್ಲ. ತಾವೇ ತಪ್ಪು ಮಾಡಿರುವುದಾಗಿ ಮುಖ್ಯಮಂತ್ರಿ ಒಪ್ಪಿಕೊಳ್ಳುತ್ತಿದ್ದಾರೆಯೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.