ADVERTISEMENT

ಬೆಂಗಳೂರಿನಲ್ಲಿ 4 ಪಟ್ಟು ಹೆಚ್ಚು ಹರಡಿದ್ದ ಕೋವಿಡ್‌

ತ್ಯಾಜ್ಯ ನೀರಿನ ಮೂಲಕ ಕೋವಿಡ್‌ ಹರಡುವಿಕೆ ಪತ್ತೆ ವಿಧಾನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 18:37 IST
Last Updated 3 ಫೆಬ್ರುವರಿ 2023, 18:37 IST
ಕೋವಿಡ್‌
ಕೋವಿಡ್‌   

ಬೆಂಗಳೂರು: ಕೋವಿಡ್‌ ಸೋಂಕಿಗೆ ಸಂಬಂಧಿಸಿದಂತೆ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದಾಗ ಲಭ್ಯವಾಗುತ್ತಿದ್ದ ಪ್ರಕರಣಗಳಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಜನರಲ್ಲಿ ಕೋವಿಡ್‌ ಸೋಂಕು ಹರಡಿತ್ತು ಎಂದು ಬೆಂಗಳೂರಿನ ‘ಟಾಟಾ ಇನ್ಸ್‌ಟಿಟ್ಯೂಟ್‌ ಫಾರ್‌ ಜೆನಿಟಿಕ್ಸ್‌ ಅಂಡ್‌ ಸೊಸೈಟಿ’ (ಟಿಐಜಿಎಸ್‌) ನಡೆಸಿರುವ ಅಧ್ಯಯನ ವರದಿ ತಿಳಿಸಿದೆ.

ಈ ಸಂಸ್ಥೆಯು ಬೆಂಗಳೂರು ನಗರದಲ್ಲಿ 2022ರ ಜನವರಿಯಿಂದ 2022ರ ಜೂನ್‌ವರೆಗೂ ಪ್ರತಿ ವಾರ ನಗರದ 28 ಚರಂಡಿಗಳಿಂದ ತ್ಯಾಜ್ಯ ನೀರು ಸಂಗ್ರಹಿಸಿ ಆನುವಂಶಿಕ ಧಾತುವಿನ ಮೇಲೆ ನಿಗಾ ಇರಿಸುವ (ಜಿನೋಮಿಕ್‌ ಸರ್ವೇಲೆನ್ಸ್‌) ವಿಧಾನವನ್ನು ಅನುಸರಿಸಿ ಅಧ್ಯಯನ ನಡೆಸಲಾಯಿತು. ಈ ವಿಧಾನದಿಂದ ವೈರಾಣುವಿನ ಹೊರೆ, ವೈರಾಣುಗಳು ತಳಿ ವೈವಿಧ್ಯಗಳು ಮತ್ತು ಹೊಸ ವೈರಾಣುವಿನ ಬಗ್ಗೆಯೂ ನಿಖರ ಮಾಹಿತಿ ಪಡೆಯಲು ಸಾಧ್ಯವಾಯಿತು ಎಂದು ಟಿಐಜಿಎಸ್‌ನ ವಿಜ್ಞಾನಿ ಡಾ.ಫರ್‍ಹಾ ಇಶ್ತಿಯಾಕ್‌ ತಿಳಿಸಿದ್ದಾರೆ.

ಅಚ್ಚರಿಯ ಅಂಶವೆಂದರೆ, ಕೋವಿಡ್‌ ಸೋಂಕಿನ ಬಗ್ಗೆ ಕ್ಲಿನಿಕಲ್‌ ಪರೀಕ್ಷೆಯಲ್ಲಿ ಕಂಡು ಬರುತ್ತಿದ್ದ ಸೋಂಕಿತರ ಸಂಖ್ಯೆಗಿಂತಲೂ ಆನುವಂಶಿಕ ಧಾತುವಿನ ಮೇಲಿನ ನಿಗಾ ವಿಧಾನದಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ನಾಲ್ಕು ಪಟ್ಟು ಹೆಚ್ಚು ಸೋಂಕಿತರಾಗಿದ್ದು ಪತ್ತೆ ಆಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತ್ಯಾಜ್ಯ ನೀರಿನಲ್ಲಿ ಆನುವಂಶಿಕ ಧಾತುವಿನ ಮೇಲೆ ನಿಗಾ ಇರಿಸುವ ಮೂಲಕ ಕೋವಿಡ್‌–19 ರ ಹರಡುವಿಕೆ ಮುನ್ಸೂಚನೆಯನ್ನು ಪಡೆಯಬಹುದು ಮತ್ತು ವೈರಾಣುವಿನ ಹೊಸ ತಳಿಗಳನ್ನು ಬೇಗನೇ ಪತ್ತೆ ಮಾಡುವುದಕ್ಕೂ ಸಾಧ್ಯವಾಗುತ್ತದೆ. ತ್ಯಾಜ್ಯ ನೀರಿನಲ್ಲಿ ರೋಗಕಾರಕಗಳ ಮೇಲೆ ನಿಗಾ ಇಡುವುದು ಅತ್ಯಂತ ಕಡಿಮೆ ವೆಚ್ಚದ ವಿಧಾನ. ಈ ವಿಧಾನದ ಮೂಲಕ ಸಮುದಾಯದಲ್ಲಿ ವೈರಾಣು ಹರಡುವಿಕೆ ಪ್ರಮಾಣವನ್ನೂ ನಿಖರವಾಗಿ ಗುರುತಿಸಿ, ಅರ್ಥೈಸಿಕೊಳ್ಳಲೂ ಸಾಧ್ಯವಾಗುತ್ತದೆ. ಅಲ್ಲದೇ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿಯ ತತ್‌ ಕ್ಷಣದ ಚಿತ್ರಣ ಪಡೆದು ಸಾಂಕ್ರಾಮಿಕದ ನಿರ್ವಹಣೆಯನ್ನುಸಮರ್ಪಕವಾಗಿ ಮಾಡಲು ಸಾಧ್ಯ ಎಂದು ಅವರು ವಿವರಿಸಿದ್ದಾರೆ.

ಸಮುದಾಯದಲ್ಲಿ ಹರಡಿದ ಕೋವಿಡ್ ವೈರಾಣುಗಳ ತಳಿಗಳ ಬಗ್ಗೆ ಕ್ಲಿನಿಕಲ್‌ ದತ್ತಾಂಶ ಆಧರಿಸಿ ನಡೆಸಿರುವ ಅಧ್ಯಯನಗಳು ಸೀಮಿತ. ಹೀಗಾಗಿ ಸಮುದಾಯದಲ್ಲಿ ವೈರಾಣುಗಳ ತಳಿಗಳ ಸಮೃದ್ಧಿಯನ್ನು ಸಾಂಪ್ರದಾಯಿಕ ವಿಧಾನ ದಲ್ಲಿ ಪತ್ತೆ ಮಾಡುವುದು ಕಷ್ಟ. ಆದರೆ, ತ್ಯಾಜ್ಯ ನೀರಿನಲ್ಲಿ ಆನುವಂಶಿಕ ಧಾತುವಿನ ಮೇಲೆ ನಿಗಾ ಇಡುವ ವಿಧಾನದಿಂದ ಕೋವಿಡ್‌ ಹರಡುವಿಕೆಯನ್ನು ನಿಖರವಾಗಿ ಹೇಳಲು ಸಾಧ್ಯ ವಿದೆ. ಬ್ರೆಜಿಲ್‌ ಮತ್ತು ದಕ್ಷಿಣ ಅಮೆರಿಕದ ಇತರೆಡೆಯೂ ಇದು ಸಾಬೀತಾಗಿದೆ ಎಂದು ಡಾ.ಉಮಾ ರಾಮಕೃಷ್ಣನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.