ADVERTISEMENT

ಲಸಿಕೆ: 2ನೇ ಡೋಸ್‌ನಿಂದ ಉತ್ತಮ ಫಲಿತಾಂಶ -ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ

ಅರುಂಧತಿ ಚಂದ್ರಶೇಖರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 17:06 IST
Last Updated 9 ಜುಲೈ 2021, 17:06 IST
ಅರುಂಧತಿ ಚಂದ್ರಶೇಖರ್
ಅರುಂಧತಿ ಚಂದ್ರಶೇಖರ್   

ಬೆಂಗಳೂರು: ‘ಕೋವಿಡ್ ಲಸಿಕೆ ಎರಡನೇ ಡೋಸ್ ಪಡೆಯದಿದ್ದರೆ ರೋಗನಿರೋಧಕ ಶಕ್ತಿ ಅಷ್ಟಾಗಿ ವೃದ್ಧಿಯಾಗುವುದಿಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳದೆ ಇರಬಾರದು’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಕೆಲವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಕೋವ್ಯಾಕ್ಸಿನ್ ಲಸಿಕೆಯನ್ನು 4 ವಾರಗಳ ಬಳಿಕ ಹಾಗೂ ಕೋವಿಶೀಲ್ಡ್‌ ಲಸಿಕೆಯನ್ನು 12 ವಾರಗಳ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಮೊದಲ ಡೋಸ್ ಪಡೆದ ಬಳಿಕ ಕೊರೊನಾ ಸೋಂಕಿತರಾಗಿದ್ದಲ್ಲಿ ಚೇತರಿಸಿಕೊಂಡ ಮೂರು ತಿಂಗಳ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಬೇಕು. ಕೋವಿಡ್ ಲಸಿಕೆ ಪಡೆದ ಬಳಿಕ ಸೋಂಕು ತಗಲುವುದೇ ಇಲ್ಲ ಎಂದು ಹೇಳಲಾಗದು. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ. ಲಸಿಕೆ ಪಡೆದ ಬಳಿಕ ಕೂಡ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ವದಂತಿಗೆ ಕಿವಿಗೊಡದಿರಿ: ‘ಲಸಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವದಂತಿಗಳನ್ನು ನಂಬಬಾರದು. ಲಸಿಕೆಯು ಸುರಕ್ಷಿತವಾಗಿದೆ. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಲಸಿಕೆ ಪಡೆದುಕೊಳ್ಳುವಂತೆ ಕೆಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ. ಗರ್ಭಿಣಿಯರು ಲಸಿಕೆ ಪಡೆಯುವುದರಿಂದ ಮಗುವಿನ ಮೇಲೆ ಯಾವುದೇ ಅಡ್ಡ ಪರಿಣಾಮ ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಯಾವುದೇ ಆತಂಕ ಪಡಬೇಕಾಗಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಮಕ್ಕಳ ಮೇಲೆ ಅಧ್ಯಯನ ನಡೆಯುತ್ತಿರುವ ಕಾರಣ ಅವರಿಗೆ ಲಸಿಕೆ ನೀಡುತ್ತಿಲ್ಲ. ಅಧ್ಯಯನಗಳು ಪೂರ್ಣಗೊಂಡು, ಲಸಿಕೆ ಸುರಕ್ಷಿತ ಎನ್ನುವುದು ಖಚಿತಪಟ್ಟ ಬಳಿಕ ಲಸಿಕೆ ವಿತರಿಸಲಾಗುತ್ತದೆ. 18 ವರ್ಷ ಮೇಲ್ಪಟ್ಟವರಲ್ಲಿ ದುರ್ಬಲ ವರ್ಗವದರು, ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಅಂಗವಿಕಲರು ಸೇರಿದಂತೆ ವಿವಿಧ ವರ್ಗದವರನ್ನು ಗುರುತಿಸಿ, ಆದ್ಯತೆ ನೀಡಲಾಗಿದೆ. ಜನಸಂಪರ್ಕಕ್ಕೆ ಬರುವ ಕೆಲವೊಂದು ಗುಂಪುಗಳಿಗೆ ಕೂಡ ಲಸಿಕೆ ನೀಡುತ್ತಿದ್ದೇವೆ. ಎಲ್ಲರಿಗೂ ಲಸಿಕೆ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.