ADVERTISEMENT

ಇಂದಿನಿಂದ ಮಕ್ಕಳಿಗೆ ಲಸಿಕೆ: 15ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್‌

31.75 ಲಕ್ಷ ಮಕ್ಕಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 0:30 IST
Last Updated 3 ಜನವರಿ 2022, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಸೋಮವಾರ (ಜ.3) ಆರಂಭವಾಗಲಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಈ ವಯೋಮಾನದ ಮಕ್ಕಳಿಗೆ ಸದ್ಯ ‘ಕೋವ್ಯಾಕ್ಸಿನ್’ ಲಸಿಕೆ ಮಾತ್ರ ನೀಡಲು ನಿರ್ಧರಿಸಲಾಗಿದೆ. 2007ನೇ ಇಸವಿಯಲ್ಲಿ ಅಥವಾ ಅದಕ್ಕೂ ಮೊದಲು ಜನಿಸಿದವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.

ರಾಜ್ಯದಲ್ಲಿ ಈ ವಯೋಮಾನದ 31.75 ಲಕ್ಷ ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಮೊದಲ ದಿನವೇ ನಾಲ್ಕು ಸಾವಿರಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ADVERTISEMENT

ಕೋವ್ಯಾಕ್ಸಿನ್‌ ಲಸಿಕೆಯ16 ಲಕ್ಷ ಡೋಸ್‌ ಸಂಗ್ರಹವಿದೆ. ಶಾಲೆ, ಕಾಲೇಜುಗಳಲ್ಲಿಯೂ ಲಸಿಕೆ ನೀಡಲು ಸಿದ್ಧತೆ ಆಗಿದೆ. ಇಲ್ಲಿ ಸಾಧ್ಯವಾಗದಿದ್ದರೆ ಸಮೀಪದ ಆರೋಗ್ಯ ಕೇಂದ್ರಗಳಿಗೂ ತೆರಳಿ ಲಸಿಕೆ ಪಡೆಯಬಹುದು. ಲಸಿಕೆ ಪಡೆದವರು ಪ್ರಮಾಣಪತ್ರವನ್ನು ಕೋವಿನ್‌ ಪೋರ್ಟಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಬೆಳಿಗ್ಗೆ 9.30ಕ್ಕೆ ನಗರದ ಮೂಡಲಪಾಳ್ಯದ ಭೈರವೇಶ್ವರ ನಗರದ ಬಿಬಿಎಂಪಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಸ್ನಾತಕೋತ್ತರ ಕಾಲೇಜಿನಲ್ಲಿ ಈ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಮೊಬೈಲ್ ಮೂಲಕ ನೋಂದಣಿ: ಮಕ್ಕಳ ಪರವಾಗಿ ಪೋಷಕರು ಅಥವಾ ಶಾಲೆಯ ಶಿಕ್ಷಕರು ಅಥವಾ ಮುಖ್ಯ ಶಿಕ್ಷಕರ ಮೊಬೈಲ್‌ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು ನಿರ್ದಿಷ್ಟವಾಗಿ ಒಂದು ದಿನ ನಿಗದಿಪಡಿಸಬೇಕು. ಆ ದಿನದಂದು ಮಕ್ಕಳನ್ನು ಕರೆಸಿಕೊಂಡು ಲಸಿಕೆ ಹಾಕಿಸಬೇಕು. ಈ ಬಗ್ಗೆ ಶಾಲೆಗಳಿಗೂ ನಿರ್ದೇಶನ ನೀಡಲಾಗಿದೆ.ಶಾಲೆಯಿಂದ ಹೊರಗುಳಿದ, ಶಾಲೆ ತೊರೆದ ಮಕ್ಕಳನ್ನು ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುತಿಸಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದೆ.

‘ಮೊದಲ ಡೋಸ್‌ ಪಡೆದ 28 ದಿನದ ನಂತರ ಎರಡನೇ ಡೋಸ್‌ ಲಸಿಕೆ ನೀಡಲಾಗುವುದು. ಲಸಿಕೆ ಬಗ್ಗೆ ಭಯ ಅಥವಾ ಆತಂಕ ಅನಗತ್ಯ. ಸಾಕಷ್ಟು ಅಧ್ಯಯನ ನಡೆಸಿ ಸುರಕ್ಷಿತ ಎನ್ನುವುದು ಸಾಬೀತಾದ ನಂತರವೇ ನೀಡಲಾಗುತ್ತಿದೆ. ಎಲ್ಲ ಸರ್ಕಾರಿ ಕೇಂದ್ರಗಳಲ್ಲಿ ಮತ್ತು ಶಾಲೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಟಿಡಿ ಅಥವಾ ಇನ್ನಾವುದೇ ಲಸಿಕೆ ಪಡೆದವರು 15 ದಿನದ ನಂತರ ಕೋವ್ಯಾಕ್ಸಿನ್‌ ಲಸಿಕೆ ಪಡೆಯಬೇಕು’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.