ADVERTISEMENT

ಕೋವಿಡ್‌ ಲಸಿಕೆ ಅಭಿಯಾನಕ್ಕೆ ‘ವದಂತಿ’ಗಳೇ ಅಡ್ಡಿ!

ಮಾಧ್ಯಮ ಕಾರ್ಯಾಗಾರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 22:21 IST
Last Updated 17 ಫೆಬ್ರುವರಿ 2021, 22:21 IST
ಕಾರ್ಯಾಗಾರದಲ್ಲಿ ಡಾ.ಕೆ.ವಿ. ತ್ರಿಲೋಕಚಂದ್ರ, ಡಾ. ಅರುಂಧತಿ ಚಂದ್ರಶೇಖರ್, ಡಾ. ರಜನಿ ಇದ್ದರು
ಕಾರ್ಯಾಗಾರದಲ್ಲಿ ಡಾ.ಕೆ.ವಿ. ತ್ರಿಲೋಕಚಂದ್ರ, ಡಾ. ಅರುಂಧತಿ ಚಂದ್ರಶೇಖರ್, ಡಾ. ರಜನಿ ಇದ್ದರು   

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್ ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕಲು ವದಂತಿಗಳೇ ಕಾರಣ. ಲಸಿಕೆ ಕುರಿತಂತೆ ವಿಶ್ವಾಸ ಮೂಡಿಸಲು ಮಾಧ್ಯಮದವರು ಪಾರದರ್ಶಕವಾಗಿ, ಸರಿಯಾದ ಸುದ್ದಿಯನ್ನು ಜನರಿಗೆ ತಲುಪಿಸಿಸಬೇಕು. ಆಗ ಮಾತ್ರ ಈ ಅಭಿಯಾನ ಯಶಸ್ಸು ಕಾಣಲು ಸಾಧ್ಯ’ ಎಂದು ಕೋವಿಡ್‌ ಲಸಿಕೆ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ಹೇಳಿದರು.

ಆರೋಗ್ಯ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕೋವಿಡ್ ಲಸಿಕೆ ಅಭಿಯಾನದ ಕುರಿತು ಬುಧವಾರ ನಡೆದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತಾನಾಡಿದ ಅವರು, ‘ಕೋವಿಡ್‌ ಲಸಿಕಾ ಅಭಿಯಾನ ಆರಂಭವಾಗಿ ಒಂದು ತಿಂಗಳಾಗಿದೆ.‌ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ನಂತರದ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬರುವವರ ಪ್ರಮಾಣ ಕಡಿಮೆಯಾಯಿತು. ಈ ಹಂತದಲ್ಲಿ ಶೇ 80ರಿಂದ 90ರಲ್ಲಿ ಇರಬೇಕಿತ್ತು. ಆದರೆ, ಈ ಪ್ರಮಾಣ ಶೇ 50ರಷ್ಟು ಮಾತ್ರವಿದೆ’ ಎಂದರು.

‘ಯಾವ ಕಾರಣಕ್ಕೆ ಈ ರೀತಿ ಹಿಂಜರಿಯುತ್ತಿದ್ದಾರೆ ಎಂಬುದರ ಕುರಿತು ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಕೋವಿಡ್ ಹೆಚ್ಚು ಇದ್ದ ಸಮಯದಲ್ಲಿ ಲಸಿಕೆ ಯಾವಾಗ ಬರಬಹುದು ಎಂದು ಜನ ಅಂದುಕೊಳ್ಳುತ್ತಿದ್ದರು. ಲಸಿಕೆ ಬಂದ ನಂತರ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಮಾಧ್ಯಮದವರು ನಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡದೆ, ಆರೋಗ್ಯ ಇಲಾಖೆ ನೀಡುವ ಸುದ್ದಿಗೆ ಪ್ರಾಮುಖ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಆರೋಗ್ಯ ಇಲಾಖೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಮಾತನಾಡಿ, ‘ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಹಲವು ವಂದಂತಿಗಳು ಹರಡುತ್ತಿದ್ದು, ಇದರ ಪ್ರಾಮುಖ್ಯತೆ ಹಾಗೂ ಸುರಕ್ಷತೆಯ ಬಗ್ಗೆ ಮಾಧ್ಯಮದವರು ಜನರಿಗೆ ಅರಿವು ಮೂಡಿಸಬೇಕು’ ಎಂದು ಮನವಿ ಮಾಡಿದರು.

‘ಮೊದಲ ಲಸಿಕಾ ಅಭಿಯಾನಕ್ಕೆ ಫೆ. 20ರಂದು ಕೊನೆ ದಿನ. ಅಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಯಲಿದೆ’ ಎಂದೂ ಹೇಳಿದರು.

ಲಸಿಕೆ ಸಂಬಂಧ ಇರುವ ಊಹಾಪೋಹಗಳು, ಯಾರಿಗೆ ಲಸಿಕೆ ನೀಡಲಾಗುತ್ತದೆ, ಯಾರಿಗೆ ಲಸಿಕೆ ಸುರಕ್ಷಿತ ಮುಂತಾದ ವಿಷಯಗಳ ಕುರಿತು ಸಂವಾದ ನಡೆಯಿತು.

ಲಸಿಕಾ ವಿಭಾಗದ ಉಪನಿರ್ದೇಶಕಿ ಡಾ. ರಜನಿ ಸ್ವಾಗತಿಸಿದರು. ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ ಪಾಟೀಲ, ತಾಂತ್ರಿಕ ಸಲಹಾ ಸಮಿಯ ಸದಸ್ಯ ಡಾ. ರವಿ, ಡಾ. ಸುದರ್ಶನ್ ಇದ್ದರು.

ಲಸಿಕೆ: ಹಿಂಜರಿಕೆಗೆ ಕಾರಣಗಳೇನು?
* ಲಸಿಕೆ ಸುರಕ್ಷಿತವಿಲ್ಲ ಎನ್ನುವ ಭಾವನೆ, ನಾನಾ ವದಂತಿ
* ಮಹಿಳೆಯರಲ್ಲಿ ಲಸಿಕೆ ಪಡೆದರೆ ಗರ್ಭಧಾರಣೆಗೆ ಕಷ್ಟವಾಗಬಹುದೆಂಬ ಆತಂಕ
* ಮದ್ಯ ಸೇವಿಸುವವರಿಗೆ ಮುಂದೆ ಕಷ್ಟ ಆಗಬಹುದೆಂಬ ಭೀತಿ
* ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಪಡೆದರೆ, ತೊಂದರೆಯಾಗಿ ಪರೀಕ್ಷೆ ತಪ್ಪಬಹುದೆಂಬ ಭಯ
* ಕೆಲವರಿಗೆ ಎರಡನೇ ಡೋಸ್ ತಪ್ಪಬಹುದೆಂಬ ಸಂದೇಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.