ADVERTISEMENT

ಸಹಕಾರ ಸಂಸ್ಥೆಗಳಲ್ಲಿ ಹಣ ದುರ್ಬಳಕೆ ಮಾಡಿದರೆ ಕ್ರಿಮಿನಲ್ ಪ್ರಕರಣ: ಎಚ್ಚರಿಕೆ

ಸಚಿವ ಸೋಮಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 19:24 IST
Last Updated 5 ಮೇ 2020, 19:24 IST
ಸಹಕಾರ ಸಂಘಗಳ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದುವರೆಗೆ ₹50.50 ಕೋಟಿ ದೇಣಿಗೆ ನೀಡಲಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರು ₹ 85 ಲಕ್ಷದ ಚೆಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದರು
ಸಹಕಾರ ಸಂಘಗಳ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದುವರೆಗೆ ₹50.50 ಕೋಟಿ ದೇಣಿಗೆ ನೀಡಲಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರು ₹ 85 ಲಕ್ಷದ ಚೆಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದರು   

ಬೆಂಗಳೂರು: ‘ಸಹಕಾರ ಇಲಾಖೆ ಮತ್ತು ಸಹಕಾರ ಸಂಸ್ಥೆಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ಸಹಿಸಲಾಗದು. ಸಾರ್ವಜನಿಕರ ಹಣ ದುರುಪಯೋಗ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಸಿದರು.

ಮಂಗಳವಾರ ಸಹಕಾರ ಇಲಾಖೆಯ ಲೆಕ್ಕಪತ್ರ ಸಭೆ ನಡೆಸಿದ ಅವರು,‘ಅಪೆಕ್ಸ್ ಬ್ಯಾಂಕ್, ಕೆಎಂಎಫ್, ಮಾರ್ಕೆಟಿಂಗ್ ಫೆಡರೇಷನ್‌ಗಳ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳನ್ನೇ ನಿಯೋಜಿಸಬೇಕು. ಆಗ ಆಡಳಿತ ಚುರುಕುಗೊಂಡು ಬಿಗಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.

‘ಈ ಹುದ್ದೆಯಲ್ಲಿಯೇ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅವರಿಗೆ ಅನುವು ಮಾಡಿಕೊಡಬೇಕು. ಜೊತೆಗೆ ಅವರಿಗೆ ಆ ಕ್ಷೇತ್ರದ ಮೇಲೆ ಆಸಕ್ತಿಯೂ ಇರಬೇಕು. ಅಂಥವರನ್ನೇ ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು’ ಎಂದು ಸಚಿವರು ಹೇಳಿದರು.

ADVERTISEMENT

‘ಇತ್ತೀಚಿನ ಹಗರಣಗಳು, ಸಾರ್ವಜನಿಕರ ಹಣ ದುರುಪಯೋಗಗಳಂತಹ ಪ್ರಕರಣಗಳನ್ನು ಗಮನಿಸಿದಾಗ ಕಠಿಣ ನಿಯಮ ಜಾರಿಗೆ ತರುವುದು ಅನಿವಾರ್ಯ’ ಎಂದರು.

ತಪ್ಪು ಮಾಡಿದವರಿಂದಲೇ ತನಿಖೆ ಬೇಡ: ‘ತಪ್ಪು ಮಾಡಿದವರಿಗೇ ತನಿಖೆಯ ಅಧಿಕಾರ ಕೊಟ್ಟರೆ ಹಗರಣ ಹೊರಬೀಳುವುದಾದರೂ ಹೇಗೆ? ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಾದರೂ ಹೇಗೆ? ಆ ನಿಟ್ಟಿನಲ್ಲಿ ಕಾನೂನು-ಕಾಯ್ದೆ ಬಲಗೊಳಿಸಲು ಬೇಕಾದ ಅಂಶಗಳೊಂದಿಗೆ ವರದಿ ಸಿದ್ಧಪಡಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಸಹಕಾರ ಇಲಾಖೆಯ ಈಗಿನ ಕಾಯ್ದೆಗಳನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಸಹಕಾರ ಇಲಾಖೆಗಳ ರಾಷ್ಟ್ರೀಯ ಕಾರ್ಯಾಗಾರ ಕರೆದು ಎಲ್ಲರ ಸಮಸ್ಯೆಗಳು, ಅಲ್ಲಿರುವ ಉತ್ತಮ ಅಂಶಗಳನ್ನೆಲ್ಲ ಪಟ್ಟಿಮಾಡಬೇಕಿದೆ. ಶೀಘ್ರ ಇಂತಹ ಕಾರ್ಯಾಗಾರ ಏರ್ಪಡಿಸಲು ಸಿದ್ಧತೆ ಮಾಡಿ’ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

**

ಒಮ್ಮೆ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುವಂತಹ ಕಠಿಣ ಕಾನೂನು ತರಬೇಕಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.
-ಎಸ್‌.ಟಿ.ಸೋಮಶೇಖರ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.