ADVERTISEMENT

ತಿಂಗಳಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

16 ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 20:06 IST
Last Updated 13 ಅಕ್ಟೋಬರ್ 2022, 20:06 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಳೆಹಾನಿ ಕುರಿತು 16 ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್ಪಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ‘ಅಕ್ಟೋಬರ್ ತಿಂಗಳಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿ, ತಿಂಗಳೊಳಗೆ ಪರಿಹಾರ ವಿತರಿಸಬೇಕು’ ಎಂದು ಸೂಚಿಸಿದರು.

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬುಧವಾರ ರಾತ್ರಿ ತಾಲ್ಲೂಕಿನ ಕಮಲಾಪುರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಅವರು ಗುರುವಾರ ಬೆಳಿಗ್ಗೆ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರೊಂದಿಗೆ ಸಭೆ ನಡೆಸಿದರು.

ಮನೆಗಳ ಹಾನಿ ದಾಖಲಿಸುವಾಗ ಯಾವುದೇ ಲೋಪವಾಗದಂತೆ ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸಲು ವಿಪತ್ತು ನಿರ್ವಹಣೆ ಆಯುಕ್ತರಿಗೆ ನಿರ್ದೇಶನ ಕೊಡಲಾಗಿದೆ ಎಂದರು.

ಮಳೆಗೆ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೂಲಸೌಕರ್ಯ ಹಾನಿಗೆ ಸಂಬಂಧಿಸಿ ಅದರ ತೀವ್ರತೆ ಆಧರಿಸಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ದುರಸ್ತಿ, ಹೆಚ್ಚುವರಿ‌ ನೆರವು ಅಗತ್ಯವಿರುವ ಕಾಮಗಾರಿಗಳು, ಸಂಪೂರ್ಣ ಪುನರ್ ನಿರ್ಮಾಣದ ಕಾಮಗಾರಿ ಗುರುತಿಸಿ ಕ್ರಮ ಜರುಗಿಸಬೇಕೆಂದು ಸೂಚಿಸಿದರು.

ಸೇತುವೆಗಳ ದುರಸ್ತಿ, ಅಗತ್ಯವಿದ್ದರೆ ಮರು ನಿರ್ಮಾಣ ಮಾಡಬೇಕು. ವಿದ್ಯುತ್ ಕಂಬ, ಟ್ರಾನ್ಸಫಾರ್ಮರ್ ಗಳನ್ನು 24 ಗಂಟೆಯೊಳಗೆ ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹೊಳೆ, ಹಳ್ಳಗಳ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದೂ ತಿಳಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ, ಜಿಪಂ‌ ಸಿಇಒ ಹರ್ಷಲ್ ಭೋಯರ್, ಎಸ್ಪಿ ಡಾ. ಅರುಣ್ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಇದ್ದರು.

ಮಳೆಗೆ 13 ಜನರ ಸಾವು, 3309 ಮನೆಗಳಿಗೆ ಹಾನಿ

ಹಿಂಗಾರು‌ ಹಂಗಾಮಿನಲ್ಲಿ ರಾಜ್ಯದಲ್ಲಿ ಅಕ್ಟೋಬರ್ ತಿಂಗಳೊಂದರಲ್ಲೇ ಮಳೆಗೆ 13 ಜನ ಸಾವಿಗೀಡಾಗಿದ್ದು, 3309 ಮನೆಗಳಿಗೆ ಹಾನಿ‌ ಉಂಟಾಗಿದೆ. 28 ಜಾನುವಾರುಗಳು ಮೃತಪಟ್ಟಿವೆ. 6,279 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಐದು ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1330 ಜನ ಆಶ್ರಯ ಪಡೆದಿದ್ದಾರೆ. 8.83 ಲಕ್ಷ ರೈತರಿಗೆ ₹947.8 ಕೋಟಿ ಪರಿಹಾರ ವಿತರಿಸಲಾಗಿದೆ. ಎರಡನೇ ಹಂತದಲ್ಲಿ 2 ಲಕ್ಷ ರೈತರಿಗೆ ₹250 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿ.ಎಂ ಹೇಳಿದರು.

ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ 48485 ಮನೆ ಹಾನಿ ಸಂಭವಿಸಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 635.13 ಕೋಟಿ ಲಭ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.