ADVERTISEMENT

ಬೆಳೆ ಸಮೀಕ್ಷೆ ಆ್ಯಪ್‌ ಅಪ್‌ಲೋಡ್‌ಗೆ ಸೆ.29ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:37 IST
Last Updated 20 ಆಗಸ್ಟ್ 2020, 21:37 IST

ಬೆಂಗಳೂರು: ‘ನನ್ನ ಬೆಳೆ ನನ್ನ ಹಕ್ಕು, ನನ್ನ ಬೆಳೆ ಸಮೀಕ್ಷೆ, ನನ್ನ ಪ್ರಮಾಣಪತ್ರ’ ಎಂದು ಪ್ರಮಾಣಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆ್ಯಪ್‌ಗೆ ಅಪ್‌ಲೋಡ್‌‌ ಮಾಡುವ ಅವಧಿಯನ್ನು ಸೆ.29ರವರೆಗೆ ವಿಸ್ತರಿಸಲಾಗಿದೆ.

ಈ ಆ್ಯಪ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆ. 20ರವರೆಗೆ 6,65,810 ರೈತರು ಅಪ್ಲೋಡ್ ಮಾಡಿದ್ದಾರೆ. ಆ. 24 ಕೊನೆ ದಿನವಾಗಿತ್ತು. ಅನೇಕ ಕಡೆಗಳಲ್ಲಿ ರೈತರು ಅಪ್‌ಲೋಡ್ ಮಾಡಲು ಸಾಧ್ಯವಾಗಿಲ್ಲ ಎಂಬ ದೂರುಗಳು ಬಂದಿದ್ದವು. ಈ ಕಾರಣದಿಂದ ಸುಮಾರು ಒಂದು ತಿಂಗಳು ಅವಧಿ ವಿಸ್ತರಿಸುವ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.

ಸ್ಟಾರ್ಟ್‌ ಅಪ್‌ ಸಮ್ಮೇಳನ
‘ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ (ಆ. 21) ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟ್‌ಪ್) ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆನ್‌ಲೈನ್‌ ಮೂಲಕ ನಡೆಯಲಿರುವ ಈ ಸಮ್ಮೇಳನದಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳು, ಆಹಾರ ಸಂಸ್ಕರಣಾ ಉದ್ದಿಮೆಗಳ ವ್ಯಾಪ್ತಿ ಹಾಗೂ ಅವಕಾಶಗಳು, ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಕುರಿತು ಮಾಹಿತಿ ವಿನಿಯಮ, ಚರ್ಚೆ, ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್‌ಪ್ ಮಹತ್ವ, ರೈತರಿಗೆ ಆಗುವ ಲಾಭ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಕೃಷಿ ನವೋದ್ಯಮಿಗಳು, ಹೂಡಿಕೆದಾರರು ಭಾಗವಹಿಸಲಿದ್ದಾರೆ’ ಎಂದರು.

ಶೇ 95ರಷ್ಟು ಬಿತ್ತನೆ: ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆಗಸ್ಟ್ 19ರವರೆಗೆ ಶೇ 95ರಷ್ಟು (68.26 ಲಕ್ಷ ಹೆಕ್ಟೇರ್‌) ಬಿತ್ತನೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.