ADVERTISEMENT

ಮುಖ್ಯಮಂತ್ರಿ ಬದಲಾದರೆ ಸಾಲದು, ಕಾಂಗ್ರೆಸ್ ಅಧಿಕಾರದಿಂದ ಇಳಿಯಬೇಕಿದೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:53 IST
Last Updated 3 ಅಕ್ಟೋಬರ್ 2025, 5:53 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಳಗಾವಿ: 'ಸಿದ್ದರಾಮಯ್ಯ ಬಿಟ್ಟು ಮತ್ತೊಬ್ಬರು ಮುಖ್ಯಮಂತ್ರಿಯಾದೆ ಸಾಲದು. ಒಬ್ಬ ಭ್ರಷ್ಟ ಹೋದರೆ, ಮತ್ತೊಬ್ಬ ಭ್ರಷ್ಟ ಬರುತ್ತಾರೆ‌. ಹಾಗಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಇಳಿಯಬೇಕಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು‌.

ನವೆಂಬರ್ ಕ್ರಾಂತಿ ವಿಚಾರವಾಗಿ, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

'ಸಿದ್ದರಾಮಯ್ಯ ಪದೇಪದೆ ನಾನೇ ಸಿ.ಎಂ ಎನ್ನುತ್ತಿದ್ದಾರೆ. ತಮ್ಮ ಪಕ್ಷದ ಹೈಕಮಾಂಡ್ ಸೆಡ್ಡು ಹೊಡೆದಿದ್ದಾರೆ. ಆ ಹೈಕಮಾಂಡ್ ಈಗ ವೀಕ್ ಆಗಿದೆ' ಎಂದು ಲೇವಡಿ ಮಾಡಿದರು.

ADVERTISEMENT

'ಈ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂಬ ಮಾತು ಶುರುವಾಗಿದೆ. ನಮಗೆ ಯಾರು ಮುಖ್ಯಮಂತ್ರಿ ಎಂಬುದು ಮುಖ್ಯವಲ್ಲ. ಜನ ಅಧಿಕಾರ ನೀಡಿದ್ದಾರೆ. ಮೊದಲು ಅವರ ಸಂಕಷ್ಟಕ್ಕೆ ಸ್ಪಂದಿಸಿ' ಎಂದರು.

'ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಡಿಎನ್ಎನಲ್ಲೇ ಇದೆ. ಭ್ರಷ್ಟಾಚಾರ ಕಡಿಮೆಯಾಗಬೇಕಾದರೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕಾದರೆ ಕಾಂಗ್ರೆಸ್ ಅಧಿಕಾರದಿಂದ ಇಳಿಯಬೇಕಿದೆ' ಎಂದರು.

'ಇನ್ನೆರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಡಬಲ್ ಆಗಿದೆ ಎಂದು ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಭ್ರಷ್ಟಾಚಾರಕ್ಕಾಗಿ ನೀವು ಮುಖ್ಯಮಂತ್ರಿ ಆಗಿದ್ದೀರಾ? ಗುತ್ತಿಗೆದಾರರ ಪತ್ರ ಓದಿ ನಾಚಿಕೆ ಆಗುವುದಿಲ್ಲವೇ' ಎಂದು ವ್ಯಂಗ್ಯವಾಡಿದರು.

'ಜನರ ಸಂಪರ್ಕ ಕಳೆದುಕೊಂಡಿರುವ ಕೆಲವು ಸಚಿವರು ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿದ್ದಾರೆ. ಅವರಿಗೆ ಜನರ ಸಂಕಷ್ಟ ಆಲಿಸುವ ಸಂವೇದನೆ ಇಲ್ಲ. ಚುನಾವಣೆಗಳು ಮುಗಿದ ನಂತರವಾದರೂ ಜನರ ಕಷ್ಟಕ್ಕೆ ಸ್ಪಂದಿಸಲಿ' ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.