ADVERTISEMENT

ಡಿಕೆಶಿ ಬಂಧನ| ಭಾವನಾತ್ಮಕ ಯೋಚನೆ ಸಲ್ಲ: ಸಚಿವ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 1:03 IST
Last Updated 11 ಸೆಪ್ಟೆಂಬರ್ 2019, 1:03 IST
ಸಿ.ಟಿ.ರವಿ
ಸಿ.ಟಿ.ರವಿ   

ಮೈಸೂರು: ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್ ಬಂಧನವನ್ನು ಭಾವನಾತ್ಮಕವಾಗಿ ನೋಡಬಾರದು ಎಂದು ಸಚಿವ ಸಿ.ಟಿ. ರವಿ ಒಕ್ಕಲಿಗ ಸಮುದಾಯದ ಮುಖಂಡರಿಗೆ ಕಿವಿಮಾತು ಹೇಳಿದರು.

ಬಂಧನ ಖಂಡಿಸಿ, ಒಕ್ಕಲಿಗ ಸಮುದಾಯದಿಂದ ನಡೆಯುತ್ತಿರುವ ಪ್ರತಿಭಟನೆಗೆ ಮೈಸೂರಿನಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ನಾನು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಈ ಘಟನೆಯನ್ನು ಒಕ್ಕಲಿಗ ಸಮುದಾಯದ ವಿರುದ್ಧ ನಡೆದ ಅನ್ಯಾಯವೆಂದು ಏಕೆ ಭಾವಿಸುವಿರಿ? ವಾಸ್ತವವಾಗಿ ವಿಚಾರ ಮಾಡಿ. ಆಗ ಸತ್ಯ ಏನೆಂದು ತಿಳಿಯುತ್ತದೆ’ ಎಂದರು.

‘ಕಾನೂನಿಗಿಂತ ಯಾರೂ ಮಿಗಿಲಲ್ಲ. ನನ್ನ ಮನೆಯಲ್ಲಿ ₹8 ಕೋಟಿ ಹಣ ಸಿಕ್ಕಿದರೆ ಅದಕ್ಕೆ ಲೆಕ್ಕ ಕೊಡಬೇಕು. ಇಲ್ಲದಿದ್ದರೆ ಅನುಮಾನ ಮೂಡುತ್ತದೆ. ಲೆಕ್ಕ ಕೊಡದಿದ್ದರೆ ತನಿಖೆ ಮಾಡುತ್ತಾರೆ. ಅದನ್ನೇ ಪ್ರಶ್ನಿಸಿದರೆ ಹೇಗೆ?’ ಎಂದರು.

ADVERTISEMENT

‘ಯಾವಾಗಲೂ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌, ಈಗ ಅದೇ ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ತನಿಖೆಯನ್ನು ವಿರೋಧಿಸುತ್ತಿರುವುದು ಏಕೆ? ಇವರ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕು ಯಾರಿಗೂ ಇಲ್ಲವೇ?’ ಎಂದು ತಿರುಗೇಟು ನೀಡಿದರು.

‘ಶಿವಕುಮಾರ್ ಪ್ರಕರಣಕ್ಕೆ ಜಾತಿ ನಂಟು’: ಡಿ.ಕೆ.ಶಿವಕುಮಾರ್‌ ಅವರನ್ನು ಅಕ್ರಮ ಹಣ ವಹಿವಾಟು ಕಾರಣಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ತೆಗೆದುಕೊಂಡಿದೆ. ಆದರೆ, ಇದಕ್ಕೆ ಕಾಂಗ್ರೆಸ್‌ ಪಕ್ಷ ಜಾತಿ ಬಣ್ಣ ಬಳಿಯಲು ಮುಂದಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಟೀಕಿಸಿದ್ದಾರೆ.

ಶಿವಕುಮಾರ್‌ ಬಂಧನಕ್ಕೂ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷ ಇದಕ್ಕೆ ಜಾತಿ ಬಣ್ಣ ಬಳಿಯುತ್ತಿರುವುದು ನಾಚಿಕೆಗೇಡಿನ ಸಂಗತಿ. ತನಿಖಾ ಸಂಸ್ಥೆಗಳು ಸಾಂವಿಧಾನಿಕ ರೀತಿಯಲ್ಲೇ ಕೆಲಸ ಮಾಡುತ್ತಿವೆ ಎಂದು ಟ್ವೀಟ್‌ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು, ಶಿವಕುಮಾರ್‌ ಬೆಂಬಲಿಗರು ಪ್ರತಿಭಟನೆಯನ್ನು ಶಾಂತಿ
ಯುತವಾಗಿ ನಡೆಸಲಿ. ಕಾನೂನಿನ ಮೇಲೆ ಗೌರವವಿಟ್ಟು, ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ಕೋಟ್ಯಧೀಶ ಹೇಗಾದರು?

ಚಿತ್ರದುರ್ಗ: ‘ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬಂಧನದಲ್ಲಿರುವ ಶಾಸಕ ಡಿ.ಕೆ. ಶಿವಕುಮಾರ್‌ ಶಿವಮೊಗ್ಗದಲ್ಲಿ ಕೊತ್ವಾಲ್ ರಾಮಚಂದ್ರನೊಂದಿಗೆ ಇದ್ದವರು.ಅವರು ಹೇಗೆ ₹ 850 ಕೋಟಿ ಆಸ್ತಿ ಗಳಿಸಿದರು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಉತ್ತಮ ಕೆಲಸ ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಲೂ ಹೀಗೆಯೇ ಕಾರ್ಯನಿರ್ವಹಿಸಿವೆ. ಎರಡೂ ತನಿಖಾ ಸಂಸ್ಥೆಗಳನ್ನು ಅಭಿನಂದಿಸುತ್ತೇನೆ’ ಎಂದರು.

‘ಡಿ.ಕೆ. ಶಿವಕುಮಾರ್‌ ಮಗಳ ಖಾತೆಯಲ್ಲಿ ₹ 78 ಕೋಟಿ ಪತ್ತೆ ಆಗಿದೆ. ಇಷ್ಟು ಹಣವನ್ನು ಹೇಗೆ ಸಂಪಾದಿಸಿದರು? ಹಣ ಸಂಪಾದಿಸುವ ತಂತ್ರ ಬಹಿರಂಗಪಡಿಸಲಿ. ಇತರ ಮಹಿಳೆಯರಿಗೆ ಇದರಿಂದ ಉಪಯೋಗವಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ಸೋನಿಯಾ ಭೇಟಿ ಮಾಡಿದ ಡಿ.ಕೆ. ಸುರೇಶ್

ನವದೆಹಲಿ: ಡಿ.ಕೆ. ಶಿವಕುಮಾರ್‌ ಅವರ ಸೋದರ, ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ ಅವರು ಮಂಗಳವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಮಧ್ಯಾಹ್ನ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದ ಸುರೇಶ್‌, ಸೋದರನ ಬಂಧನದ ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾಗಿ ಸುದ್ದಿಗಾರರಿಗೆ ತಿಳಿಸಿದರು.

ಮುಂದುವರಿದ ವಿಚಾರಣೆ: ವಾರದ ಹಿಂದೆ (ಸೆ.3) ಬಂಧನಕ್ಕೆ ಒಳಗಾಗಿರುವ ಶಿವಕುಮಾರ್‌ ಅವರನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ಇ.ಡಿ. ಮಂಗಳವಾರವೂ ಅವರನ್ನು ವಿಚಾರಣೆಗೆ ಒಳಪಡಿಸಿತು.

ಬೆಳಿಗ್ಗೆ 11ಕ್ಕೇ ಇ.ಡಿ. ಕಚೇರಿಗೆ ಬಂದ ಶಿವಕುಮಾರ್‌ ಅವರನ್ನು ರಾತ್ರಿಯವರೆಗೆ ವಿಚಾರಣೆ ನಡೆಸಲಾಯಿತು. ಸೋದರ ಡಿ.ಕೆ. ಸುರೇಶ, ರಾಜ್ಯಸಭೆ ಸದಸ್ಯ ಜೆ.ಸಿ. ಚಂದ್ರಶೇಖರ್‌, ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಅವರು ಸಂಜೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಉದ್ಯಮಿ ಸುನಿಲ್‌ ಶರ್ಮಾ ಅವರೂ ವಿಚಾರಣೆ ಎದುರಿಸಿದ್ದು, ಸಚಿನ್‌ ನಾರಾಯಣ್‌ ಸೋಮವಾರ ಸಂಜೆ ಇ.ಡಿ. ಕಚೇರಿಯಲ್ಲಿ ಹೇಳಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.