ADVERTISEMENT

ಆರ್‌ಎಸ್‌ಎಸ್‌ ಶಾಖೆಗೆ ಬರಲು ಸಿದ್ದರಾಮಯ್ಯಗೆ ಆಹ್ವಾನ ನೀಡಿದ ಸಿಟಿ ರವಿ!

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:20 IST
Last Updated 29 ಸೆಪ್ಟೆಂಬರ್ 2021, 16:20 IST
ಸಿಟಿ ರವಿ ಹಾಗೂ ಸಿದ್ದರಾಮಯ್ಯ
ಸಿಟಿ ರವಿ ಹಾಗೂ ಸಿದ್ದರಾಮಯ್ಯ   

ಬೆಂಗಳೂರು:‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ನೀವು ಮೊದಲು ಆರ್‌ಎಸ್‌ಎಸ್‌ ಶಾಖೆಗೆ ಬರಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಟ್ವೀಟ್‌ ಸಮರ ಬುಧವಾರವೂ ಮುಂದುವರಿದಿದೆ. ‘ಆರ್‌ಎಸ್‌ಎಸ್‌ ಅನ್ನು ಹೊರಗಿನಿಂದ ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಅವರು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು’ ಎಂದು ಹೇಳಿದ್ದಾರೆ.

‘ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ಅಂಧನೊಬ್ಬ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆ. ಆರ್‌ಎಸ್‌ಎಸ್‌ ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು ಮತ್ತು ಸದೃಢ ಭಾರತವನ್ನು ಕಟ್ಟಲುಕಾರ್ಯಕರ್ತರನ್ನು ರೂಪಿಸುವ ಗರಡಿ ಮನೆ’ ಎಂದಿದ್ದಾರೆ.

ADVERTISEMENT

ಮಿದುಳಿಗೆ ಪೊರೆ: ‘ನನ್ನ ವಾಹನ ಅಪಘಾತ ಆದ ದಿನ ವಾಹನ ಚಲಾಯಿಸುತ್ತಿದ್ದವರು ಯಾರು ಎಂಬುದು ಟೋಲ್‌ ಸೇರಿದಂತೆ ವಿವಿಧಡೆ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆಧಾರ ಇದೆ. ಆಗ ನಿಮ್ಮದೇ ಸರ್ಕಾರದ ಆಡಳಿತ ಇತ್ತು. ಆ ದಿನ ಸ್ಥಳದಲ್ಲಿ ದಾಖಲಿಸಿದ ಎಫ್‌ಐಆರ್‌ ಕೂಡ ಇದೆ. ಇಷ್ಟೆಲ್ಲದರ ಅರಿವೂ ನಿಮಗಿದೆ. ದುರಂತ ಎಂದರೆ ನಿಮ್ಮ ಮಿದುಳಿಗೆ ಪೊರೆ ಆವರಿಸಿದೆ. ಕಣ್ಣಿಗೆ ಪೊರೆ ಬಂದರೆ ಕ್ಯಾಟರಾಕ್ಟ್‌ ಮಾಡಿಸಬಹುದು. ನಿಮ್ಮ ಮಿದುಳಿನ ಪೊರೆಗೆ ಮದ್ದೆಲ್ಲಿ ’ ಎಂದು ವ್ಯಂಗ್ಯವಾಡಿದ್ದಾರೆ.

‘ಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು ಯಾರು ಎಂದು ಮೈಸೂರಿನ ನಾಗರೀಕರು ಈಗಲೂ ಮರೆತಿರಲಿಕ್ಕಿಲ್ಲ. ಒಮ್ಮೆ ಕೇಳಿ ನೋಡಿ ಸಿದ್ದರಾಮಯ್ಯನವರೇ’ ಎಂದು ರವಿ ಟ್ವೀಟ್‌ ಮೂಲಕ ಕಟಕಿಯಾಡಿದ್ದಾರೆ.

ಪರೇಡ್‌ಗೆ ಆಹ್ವಾನಿಸಿದ್ದ ನೆಹರೂ: ‘1962 ರಲ್ಲಿ ಭಾರತ ಚೀನಾ ಮಧ್ಯೆ ನಡೆದ ಯುದ್ಧದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸ್ವಯಂ ಸೇವಕರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಅಂದಿನ ಪ್ರಧಾನಿ ನೆಹರೂ ಅವರು 1963ರ ಗಣರಾಜ್ಯೋತ್ಸವ ದಿನಾಚರಣೆ ಪರೇಡ್‌ಗೆ ಸ್ವಯಂ ಸೇವಕರನ್ನು ಆಹ್ವಾನಿಸಿದ್ದರು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

‘ಆರ್‌ಎಸ್‌ಎಸ್‌ ಅನ್ನು ತಾಲಿಬಾನಿಗೆ ಹೋಲಿಸುವ ಮೂಲಕ ಕಾಂಗ್ರೆಸ್‌ ನಾಯಕರು ತಮ್ಮ ವೈಚಾರಿಕ ದಿವಾಳಿತನ ಪ್ರದರ್ಶಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ತಂದೆ–ತಾಯಿ ಇದ್ದಂತೆ: ‘ನಮಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ತಂದೆ–ತಾಯಿ ಇದ್ದ ಹಾಗೆ. ಜನಪರ ಚಿಂತನೆ, ಆಡಳಿತದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಬಿಜೆಪಿ ಹೇಳಿಕೊಟ್ಟಿದ್ದರೆ, ಆರ್‌ಎಸ್‌ಎಸ್‌ ನಮಗೆ ದೇಶಭಕ್ತಿ, ಸಾಮಾಜಿಕ ಸೇವೆಯಂತಹ ಉದಾತ್ತ ಗುಣಗಳನ್ನು ಹೇಳಿ ಕೊಟ್ಟಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವ್ಯಕ್ತಿಗೆ ಎರಡು ಕಣ್ಣುಗಳು ಹೇಗೆ ಮುಖ್ಯವೋ, ಹಾಗೆಯೇ ನಮಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎರಡು ಕಣ್ಣುಗಳು ಇದ್ದ ಹಾಗೆ, ಆದ್ದರಿಂದ ನಮ್ಮ ತಂದೆ–ತಾಯಿಗಳಿಗೆ ಅವಹೇಳನ ಮಾಡುವವರ ಮುಂದೆ ನಾವು ಕೈಕಟ್ಟಿ ಕೂರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಮುವಾದವೂ ತಾಲಿಬಾನ್‌ ಸಂಸ್ಕೃತಿಯೇ: ಕಾಂಗ್ರೆಸ್‌

‘ತಾಲಿಬಾನ್ ಸಂಸ್ಕೃತಿ ಎಂದರೆ ಬಂದೂಕು ಹಿಡಿಯಲೇಬೇಕಿಲ್ಲ. ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಕಂದಕ ಮೂಡಿಸುವ ಕೋಮುವಾದವೂ ತಾಲಿಬಾನ್ ಸಂಸ್ಕೃತಿಯೇ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು.

ಬಿಜೆಪಿಯವರು ತಾಲಿಬಾನ್‌ನವರು ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಅವರು ಸಮರ್ಥಿಸಿದರು.

‘ಈ ಹೇಳಿಕೆ ಮೊದಲು ಬಂದಿದ್ದೇ ನನ್ನಿಂದ. ಆರೆಸ್ಸೆಸ್‌ನಿಂದ ಸಾಮರಸ್ಯ ಮೂಡಿಸುವ ಪ್ರಯತ್ನ ಎಲ್ಲಿ ಆಗಿದೆ. ಈ ವಿಚಾರದಲ್ಲಿ ಅವರ ಕೊಡುಗೆ ಏನಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ನಂತರದ ದಿನಗಳಲ್ಲಿ ದೇಶಕ್ಕೆ ಅವರ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಚೀನಾ, ಪಾಕಿಸ್ತಾನ ಯುದ್ಧದಲ್ಲಿ ಆರೆಸ್ಸೆಸ್‌ನವರು ಹೋರಾಡಿದ್ದರು’ ಎಂಬ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ, ‘ಬಿಜೆಪಿಯವರ ಹೇಳಿಕೆ, ಚರ್ಚೆ ಕೇವಲ ಕಾದಂಬರಿ ಹಾಗೂ ಕಾಲ್ಪನಿಕ ಆಧಾರಿತವಾದುದು. ವೈಜ್ಞಾನಿಕವಾಗಿ ಯಾವ ವಿಚಾರದಲ್ಲೂ ಮಾತನಾಡುವುದಿಲ್ಲ. ಸಿ.ಟಿ.ರವಿಗೆ ಜ್ಞಾನ ಇದೆಯೊ, ಇಲ್ಲವೊ ಗೊತ್ತಿಲ್ಲ. ಯುದ್ಧದಲ್ಲಿ ಹೋರಾಡುವುದು ಮಿಲಿಟರಿ ಯೋಧರು. ಅವರಿಗೆ ಸುದೀರ್ಘ ತರಬೇತಿ ನೀಡಲಾಗಿರುತ್ತದೆ. ಈ ವಿಚಾರದಲ್ಲಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.