ADVERTISEMENT

ನೀತಿ, ನೇತೃತ್ವ, ನಿಯತ್ತು ಇಲ್ಲದ ಕಾಂಗ್ರೆಸ್ ಪಕ್ಷ: ಸಿ.ಟಿ.ರವಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 10:32 IST
Last Updated 9 ಮಾರ್ಚ್ 2023, 10:32 IST
   

ಶಹಾಪುರ (ಯಾದಗಿರಿ ಜಿಲ್ಲೆ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದೇಶದ ನಿಯತ್ತು ಇದ್ದಿದ್ದರೆ ವಿದೇಶದಲ್ಲಿ ಭಾರತವನ್ನು ಟೀಕೆ ಮಾಡುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.‌

ಶಹಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ನವರಿಗೆ ನೀತಿ, ನಿಯತ್ತು ಇಲ್ಲ. ಯಾರು ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದ್ರೊ ಅವರ ಬಳಿ ಸಹಾಯ ಕೇಳುತ್ತಾರೆ.
ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿಗೆ ದೇಶಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದೇಶಿಗರ ಸಹಾಯ ಕೇಳುವುದು ದೇಶದ್ರೋಹ.
ರಾಹುಲ್ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು.‌ ಇಲ್ಲದಿದ್ದರೆ ಅವರಿಗೆ ದೇಶಕ್ಕೆ ಬರುವ ಯೋಗ್ಯತೆ ಇಲ್ಲ. ಸಂಸತ್‌ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಆದರೆ, ಭಾರತದಲ್ಲಿ ಮುಕ್ತ ಚರ್ಚೆಗೆ ಅವಕಾಶ ಇಲ್ಲ ಎನ್ನುತ್ತಾರೆ. ಮುಕ್ತ ಚರ್ಚೆಗೆ ಅವಕಾಶ ಇಲ್ಲ ಎಂದಿದ್ದರೆ ದೇಶದ ಪ್ರಧಾನಿ ಬಗ್ಗೆ ಮಾತನಾಡಲು ಅವಕಾಶ ಇರುತ್ತಿರಲಿಲ್ಲ ಎಂದರು.

ADVERTISEMENT

ಮಲ್ಲಿಕಾರ್ಜುನ ಖರ್ಗೆ ಪವರ್ ಲೆಸ್ ಪ್ರೆಸಿಡೆಂಟ್:

ಸದ್ಯ ಕಾಂಗ್ರೆಸ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಮಕಾವಸ್ತೆ ಅಧ್ಯಕ್ಷ.‌ ವಯಸ್ಸಿನಲ್ಲಿ, ಅನುಭವದಲ್ಲಿ ಮಾತ್ರ ಖರ್ಗೆ ಅವರು ಹಿರಿಯರು ಎಂದರು‌.‌

ನೀತಿ, ನಿಯತ್ತು, ನೇತೃತ್ವ ಇರುವ ಪಕ್ಷ ಬಿಜೆಪಿ.‌ ಇದೇ ವಿಚಾರ ಇಟ್ಕೊಂಡು ಜನರ ಬಳಿ ಹೋಗುತ್ತೇವೆ ಎಂದರು.

ಕಾಂಗ್ರೆಸ್ ಫಾಲ್ಸ್ ಗ್ಯಾರಂಟಿ ಕಾರ್ಡ್ ಎಂದು ವ್ಯಂಗ್ಯ:

ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ. 32 ಹಿಂದೂ ಕಾರ್ಯಕರ್ತರ ಹತ್ಯೆ, ಪವರ್ ಕಟ್ ಮಾತ್ರ ಕಾಂಗ್ರೆಸ್ ನವರ ಕಾಲದ್ದು ನೆನಪಿಗೆ ಬರುತ್ತದೆ. ‌
ಕುಕ್ಕರ್ ಬ್ಲಾಸ್ಟ್ ಮಾಡಿದವ ಅಮಾಯಕ ಎಂದು ಡಿಕೆಶಿ ಸಹೋದರರು ಹೇಳುತ್ತಾರೆ.‌ ಎಲ್ಲರಿಗೂ ಅಮಾಯಕರ ಪಟ್ಟ ಕಟ್ಟಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.

ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೂ 24 ಗಂಟೆ ಸಮಯ ಇದೆ. 24 ಗಂಟೆ ಆಗಲಿ, ಗೊತ್ತಿಲ್ಲದೇ ನಾನು ಏನೂ ಹೇಳಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸಾಮರ್ಥ್ಯ ಇರುತ್ತದೆ. ಸಾಮರ್ಥ್ಯ ಇದ್ದವರು ಸೇರಿದಾಗ ಪಕ್ಷಕ್ಕೆ ಸಹಾಯ ಆಗುತ್ತದೆ ಎಂದು ಸಿ.ಟಿ.ರವಿ ಹೇಳಿದರು.

ವಸತಿ ಸಚಿವ ವಿ.‌ಸೋಮಣ್ಣ, ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರದಲ್ಲಿ
ಊಹಾಪೋಹದ ಪ್ರಶ್ನೆಗಳಿಗೆ ಈ ಸ್ಥಾನದಲ್ಲಿದ್ದು, ನಾನು ಉತ್ತರಿಸಬಾರದು ಎಂದರು‌‌.‌

ಸಿಟಿ ರವಿ ಬೆಂಬಲಿಗರು ಹಂಚಿದ ಸೀರೆ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕಿಯಿಸಿ ನಾನು ದತ್ತ ಜಯಂತಿಯಲ್ಲಿ ಮಾತ್ರ ಆಚರಣೆಯಲ್ಲಿ ಸೀರೆ ಹಂಚಿದ್ದು. ಕ್ಷೇತ್ರದ ಜನರಿಗೆ ದತ್ತ ಜಯಂತಿ ಸಂದರ್ಭದಲ್ಲಿ ಸೀರೆ ಹಂಚಿದ್ದೆ. ಈಗ ಸೀರೆ ಹಂಚಿದ್ದು ನಮ್ಮ ಪಕ್ಷಕ್ಕೆ ಸಂಬಂಧಿಸಿದ್ದಲ್ಲ.‌ ಸೀರೆ ಸುಟ್ಟ ವ್ಯಕ್ತಿ ನಮ್ಮ ಪಕ್ಷದವನಲ್ಲ. ಕುಡಿದ ಆಮಲಿನಲ್ಲಿ ವ್ಯಕ್ತಿಯೊಬ್ಬ ಸೀರೆ ಸುಡುವುದು ವಿಡಿಯೊದಲ್ಲಿ ನೋಡಿದ್ದೇನೆ ಎಂದರು.

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣ ಪ್ರಕರಣ ನಮ್ಮ ಪಕ್ಷಕ್ಕೆ ಮುಜುಗರ ತಂದಿದೆ.‌ ಕಾನೂನು ತನ್ನ ಕೆಲಸ ಮಾಡುತ್ತದೆ.
ಯಾರನ್ನೂ ರಕ್ಷಿಸುವ ಅಥವಾ ಟಾರ್ಗೆಟ್ ಮಾಡುವುದಿಲ್ಲ‌. ಇದೇ ಕಾಂಗ್ರೆಸ್ ಶಾಸಕ ಆಗಿದ್ರೆ ಇಡಿ, ಐಟಿ ಛೂ ಬಿಟ್ಟಿದ್ದಾರೆ ಅಂತಿದ್ದರು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸುತ್ತಾರೆ. ಜೈಕಾರ ಹಾಕಿ ಸಂಭ್ರಮಿಸುವುದು ನಮ್ಮ ಸಂಸ್ಕೃತಿ ಅಲ್ಲ. ಅದು ಡಿಕೆಶಿ, ಕಾಂಗ್ರೆಸ್ ಸಂಸ್ಕೃತಿ. ಅದನ್ನು ಯಾರೂ ಅನುಸರಿಸಬಾರದು.‌
ಡಿ.ಕೆ.ಶಿವಕುಮಾರ ಜೈಲಿನಿಂದ ಹೊರ ಬಂದಾಗ ಅವರ ಬೆಂಬಲಿಗರು ಈ ರೀತಿ ಸಂಭ್ರಮಿಸಿದ್ದರು.‌ ಆ ರೀತಿ ವೈಭವಿಕರಿಸುವುದು ತಪ್ಪು, ಆ ರೀತಿ ಯಾರೂ ಮಾಡಬಾರದು ಎಂದರು.‌
ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ನರಸಿಂಹ ನಾಯಕ (ರಾಜೂಗೌಡ), ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ರಾವ್ ಮೂಳೆ, ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲ ರೆಡ್ಡಿ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರ ನಾಥ್ ನಾದ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.