ADVERTISEMENT

ಖಾತೆ ಅಸಮಾಧಾನ: ಸರ್ಕಾರಿ ವಾಹನ, ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದ ಸಿ.ಟಿ.ರವಿ

ನನ್ನ ನಿಷ್ಠೆ ಏನಿದ್ದರೂ ಬಿಜೆಪಿಗೆ ಎಂದು ಬಳಿಕ ಸರಣಿ ಟ್ವೀಟ್ ಮೂಲಕ ಸ್ಪ‍ಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 3:58 IST
Last Updated 27 ಆಗಸ್ಟ್ 2019, 3:58 IST
   

ಚಿಕ್ಕಮಗಳೂರು: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಿರುವುದಕ್ಕೆ ಮುನಿಸಿಕೊಂಡ ಸಚಿವ ಸಿ.ಟಿ. ರವಿ ಅವರು ಸೋಮವಾರ ಸರ್ಕಾರಿ ವಾಹನ, ಭದ್ರತಾ ಸಿಬ್ಬಂದಿಯನ್ನು ವಾಪಸ್ ಕಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಅವರು ಖಾತೆ ಘೋಷಣೆಯಾಗುತ್ತಿದ್ದಂತೆ ವಾಹನ ಮತ್ತು ಭದ್ರತಾ ಸಿಬ್ಬಂದಿಯನ್ನು ವಾಪಸ್ ಕಳಿಸಿದ್ದಾರೆ. ಅವರಿಗೆ ಹಂಚಿಕೆ ಮಾಡಿರುವ ಖಾತೆ ಬಗ್ಗೆ ಅವರು ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ ಎಂದು ಆಪ್ತರೊಬ್ಬರು 'ಪ್ರಜಾವಾಣಿ' ಗೆ ತಿಳಿಸಿದರು. ರವಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಲಾಯಿತು, ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು.

ಸೋಮವಾರ ಬೆಳಿಗ್ಗೆ ಚಿಕ್ಕಮಗಳೂರಿಗೆ ಬಂದಿದ್ದ ರವಿ ಅವರು ಯಾವ ಖಾತೆ ಕೊಟ್ಟರೂ ನಿಭಾಯಿಸುವೆ, ಇಂಥದ್ದೇ ಬೇಕು ಎಂದು ಬೇಡಿಕೆ ಇಟ್ಟಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.

ADVERTISEMENT

‘ಇದ್ದರೂ ಸತ್ತರೂ ಬಿಜೆಪಿಯಲ್ಲೇ’

ಖಾತೆ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳಿಗೆ ಸರಣಿ ಟ್ವೀಟ್‌ ಮೂಲಕಸ್ಪಷ್ಟನೆ ನೀಡಿರುವ ಅವರು, ‘ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಸತ್ತರೂ ಬಿಜೆಪಿಯಲ್ಲೇ’ ಎಂದು ತಿಳಿಸಿದ್ದಾರೆ.

‘ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ.1988ರಲ್ಲಿ ಒಂದು ಬೂತ್ ಕಮಿಟಿ ಅಧ್ಯಕ್ಷನಾಗಿದ್ದ ನನಗೆ ಭಾರತೀಯ ಜನತಾ ಪಕ್ಷ ಅದೆಷ್ಟು ಹುದ್ದೆ ನೀಡಿದೆ ! ! ! ನನ್ನ ಕುಟುಂಬದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಯಾರು ಇರಲಿಲ್ಲ. ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ ಬಿಜೆಪಿ. ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ?ನಾನು ಅಸಾಮಾಧಾನಿತನೂ ಅಲ್ಲ ಬಂಡಾಯಗಾರನೂ ಅಲ್ಲ. ನನ್ನ ನಿಷ್ಠೆ ಕೇವಲ ಬಿಜೆಪಿಗೆ. ಆದರೆ ನಾನು ಸಿದ್ದಾಂತ ನಿಷ್ಠ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನನ್ನೊಳಗಿನ ಹೋರಾಟಗಾರ ಎದ್ದು ನಿಲ್ಲುತ್ತಾನೆ. ನಾನೇನು ಮಾಡಲಿ, ನಾನು ಜನರ ನಡುವಿನಿಂದ ಬೆಳೆದು ಬಂದ ಹೋರಾಟಗಾರ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ನಾಳೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ಕುಮಾರ್ ಕಟೀಲ್‌ ಅವರುಜವಾಬ್ದಾರಿ ಸ್ವೀಕರಿಸುತ್ತಿದ್ದಾರೆ. ನಾನು ಅಲ್ಲಿಗೆ ಬರುತ್ತೇನೆ. ನೀವೂ ಬನ್ನಿ, ಒಬ್ಬ ಕಾರ್ಯಕರ್ತನ ಸಂಭ್ರಮದಲ್ಲಿ ನಾವು ಭಾಗಿಯಾಗೋಣ’ ಎಂದು ಸೋಮವಾರ ರಾತ್ರಿ ರವಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.