ADVERTISEMENT

ತುಕ್ಡೆ ಗ್ಯಾಂಗ್‌, ಲಾಡೆನ್‌ ಮನಸ್ಥಿತಿಯಿಂದ ಸಂವಿಧಾನಕ್ಕೆ ಅಪಾಯ: ಸಚಿವ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:17 IST
Last Updated 9 ಮಾರ್ಚ್ 2020, 22:17 IST
ಸಿ.ಟಿ.ರವಿ ಮಾತನಾಡಿದರು
ಸಿ.ಟಿ.ರವಿ ಮಾತನಾಡಿದರು   

ಬೆಂಗಳೂರು: ‘ಸಂವಿಧಾನಕ್ಕೆ ಟೈಂ ಬಾಂಬ್‌ ಫಿಕ್ಸ್‌ ಆಗಿದೆ. ಇದನ್ನು ಎಲ್ಲರೂ ಸೇರಿ ತಡೆಯದೇ ಇದ್ದರೆ ಸಂವಿಧಾನ ಉಳಿಯುವುದಿಲ್ಲ, ಗಾಂಧಿ, ಅಂಬೇಡ್ಕರ್‌, ನೆಹರೂ, ಪಟೇಲ್‌ ಯಾರ ಹೆಸರೂ ದೇಶದಲ್ಲಿ ಇರುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ಕಾಶ್ಮೀರದಿಂದ ಲಕ್ಷಗಟ್ಟಲೆ ಪಂಡಿತರನ್ನು ಉಟ್ಟ ಬಟ್ಟೆಯಲ್ಲೇ ಹೊರದಬ್ಬುವ ಮೂಲಕ, ಸಂವಿಧಾನಕ್ಕೆ ಟೈಂ ಬಾಂಬ್‌ ಫಿಕ್ಸ್‌ ಮಾಡಿದರು. ಆಗ ಅದನ್ನು ತಡೆಯಲು ಸಂವಿಧಾನದ ಕೈಯಲ್ಲಿ ಸಾಧ್ಯವಾಗಲಿಲ್ಲ’ ಎಂದರು.

‘ಈ ಶಕ್ತಿಗಳೇ ಮತ್ತೆ ವಿಜೃಂಭಿಸುತ್ತಿವೆ. ಈ ಸ್ಥಿತಿ ದೇಶದ ಉದ್ದಗಲಕ್ಕೂ ಬರಬಾರದು. ಒಂದು ವೇಳೆ ಆ ರೀತಿ ಆದರೆ ಸಂವಿಧಾನ ಉಳಿಯುವುದಿಲ್ಲ. ಬಿನ್‌ ಲಾಡೆನ್‌, ತುಕ್ಡೆ ಗ್ಯಾಂಗ್‌ ಮನಸ್ಥಿತಿಯವರಿಂದ ಸಂವಿಧಾನಕ್ಕೆ ಅಪಾಯವಿದೆ. ಇವರಿಗೆ ದೇಶ ಮತ್ತು ಸಂವಿಧಾನದ ಬಗ್ಗೆ ಗೌರವ ಇಲ್ಲ. ದೇಶಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಮೇಜರ್‌ ಹಮೀದ್‌ ಅಂತಹವರು ಬೇಕು’ ಎಂದು ಹೇಳಿದರು.

ADVERTISEMENT

ಚತುರ್ವರ್ಣ ಈಗಲೂ ಜೀವಂತ: ‘ದೇಶ ಸಾಕಷ್ಟು ಮುಂದುವರಿದಿದ್ದರೂ ಚತುರ್ವರ್ಣ ಈಗಲೂ ಜೀವಂತ ಇದೆ. ಅದನ್ನು ಬೇರೆ ಹೆಸರಿನಲ್ಲಿ ಕರೆಯಲಾಗುತ್ತಿದೆ. ಬ್ರಾಹ್ಮಣ ‘ಎ’, ಕ್ಷತ್ರಿಯ ‘ಬಿ’, ವೈಶ್ಯ ‘ಸಿ’ ಗ್ರೂಪ್‌ ಎನ್ನಲಾಗುತ್ತಿದೆ’ ಎಂದು ಕಾಂಗ್ರೆಸ್‌ ಜಿ.ಪರಮೇಶ್ವರ ಹೇಳಿದರು.

‘ಬಾಲ್ಯದಲ್ಲಿ ಅಸ್ಪೃಶ್ಯತೆ ಅನುಭವ ಆಗಿದೆ. ಆಗ ಅದು ಗೊತ್ತಾಗಲಿಲ್ಲ. ಬೆಳೆದು ದೊಡ್ಡನಾದ ಮೇಲೆ ಅದು ಗೊತ್ತಾಯಿತು. ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದಾಗ, ದೇವಸ್ಥಾನಕ್ಕೆ ಹೋಗಿ ಮಂಗಳಾರತಿ ತೆಗೆದುಕೊಂಡು ಹೋದ ಮೇಲೆ ಆ ಹಳ್ಳಿಯಲ್ಲಿ ದೊಡ್ಡ ಗಲಾಟೆಯೇ ಆಯಿತು. ಮಾನಸಿಕ ಅಸ್ಪೃಶ್ಯತೆ ತೊಲಗಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.