ADVERTISEMENT

ಮೋದಿ-ಶಾ ಆಗಲೇ ಇದ್ದಿದ್ದರೆ ಪಾಕಿಸ್ತಾನ ಬೇಕು ಎನ್ನುವವರು ತುಂಡಾಗುತ್ತಿದ್ದರು: ರವಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 14:54 IST
Last Updated 17 ಜನವರಿ 2021, 14:54 IST
ಸಿ.ಟಿ ರವಿ
ಸಿ.ಟಿ ರವಿ    

ಬೆಳಗಾವಿ: ‘ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಹಿಂದೆಯೇ ಇದ್ದಿದ್ದರೆ ಪಾಕಿಸ್ತಾನ ಇರುತ್ತಿತ್ತಾ? ಪಾಕಿಸ್ತಾನ ಬೇಕು ಎನ್ನುವವರ ಮೇಲೆ ಈ ಜೋಡಿ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿತ್ತು. ದೇಶ ತುಂಡಾಗುತ್ತಿರಲಿಲ್ಲ. ಪಾಕಿಸ್ತಾನ ಬೇಕು ಎನ್ನುವವರು ತುಂಡಾಗುತ್ತಿದ್ದರು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಜಿಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಭಾನುವಾರ ಆಯೋಜಿಸಿದ್ದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಕಿಸಾನ್ ಸಮ್ಮಾನ್ ಯೋಜನೆ ಕಾಂಗ್ರೆಸ್ ಸರ್ಕಾರ ಅಥವಾ ಎಚ್.ಡಿ. ದೇವೇಗೌಡರು ಇದ್ದಾಗ ಇತ್ತಾ? ರೈತ ಪರ ಯೋಜನೆಗಳನ್ನು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಆಗುತ್ತಾರಾ?’ ಎಂದು ಕೇಳಿದರು.

ADVERTISEMENT

‘ನಮ್ಮ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ. ಇಷ್ಟು ವರ್ಷ ರೈತನ ಶೋಷಣೆ ಮಾಡಿದ ಕೆಟ್ಟ ವ್ಯವಸ್ಥೆ ತೆಗೆದುಹಾಕಿ ರೈತರಿಗೆ ಸ್ವಾತಂತ್ರ್ಯ ಕೊಡುತ್ತಿದ್ದೇವೆ. ಇದು ರೈತ ವಿರೋಧಿಯೇ' ಎಂದು ಪ್ರಶ್ನಿಸಿದರು.

‘ದಲ್ಲಾಳಿಗಳ ಪರ ಕೆಲಸ ಮಾಡಿದ್ದು ಕಾಂಗ್ರೆಸ್. ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಸೇವಕರಾದರೆ ನಾವು ಜನಸೇವಕರಾಗಿದ್ದೇವೆ. ಗ್ರಾಮ ಪಂಚಾಯ್ತಿಗಳ ನೂತನ ಸದಸ್ಯರು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ ಸೇವೆ ಮಾಡಬೇಕು. ಅನ್ಯಾಯ, ಅಸ್ಪೃಶ್ಯತೆ ಹಾಗೂ ಜಾತಿ ದೌರ್ಜನ್ಯದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.