ADVERTISEMENT

ಮಕ್ಕಳ ದತ್ತು ನಿಯಮ: ಶೀಘ್ರ ಪ್ರಕಟಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 18:12 IST
Last Updated 13 ಏಪ್ರಿಲ್ 2022, 18:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ’ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಅಡಿ ಮಕ್ಕಳನ್ನು ಪೋಷಕರು, ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲುಸಿ) ಒಪ್ಪಿಸಿದ ಪ್ರಕರಣಗಳಲ್ಲಿ ತನಿಖೆ ಮತ್ತು ಕೌನ್ಸೆಲಿಂಗ್ ನಡೆಸಲು ಅನುಸರಿಸಬೇಕಾದ ವಿಧಾನ ಗಳ ಕುರಿತಾದ ನಿಯಮಗಳನ್ನು ಶೀಘ್ರ ವೇ ಅಂತಿಮಗೊಳಿಸಿ ಗೆಜೆಟ್‌ನಲ್ಲಿ ಪ್ರಕಟಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಸಂಬಂಧ ’ಲೆಟ್ಜ್‌ ಕಿಟ್ ಫೌಂಡೇಷನ್‘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯ ಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲ ವಿಜಯ್ ಕುಮಾರ್ ಎ.ಪಾಟೀಲ್, ’ಹೈಕೋರ್ಟ್ ಆದೇಶದ ಅನುಸಾರ ಪೋಷಕರು ತಮ್ಮ ಮಕ್ಕಳ ನ್ನು ಸಿಡಬ್ಲುಸಿಗೆ ಒಪ್ಪಿಸಿದ ಸಂದರ್ಭದಲ್ಲಿ ತನಿಖೆ ಮತ್ತು ಕೌನ್ಸೆಲಿಂಗ್ ನಡೆಸಲು ಅನುಸರಿಸಬೇಕಾದ ನಿಯಮ ಗಳ ಕುರಿತು ಕರ್ನಾಟಕ ರಾಜ್ಯ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಅಧಿ ನಿಯಮಗಳು-2022 ರೂಪಿಸ ಲಾಗಿದೆ’ ಎಂದು ತಿಳಿಸಿದರು.

ADVERTISEMENT

’ಇದೇ 9ರಂದು ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಸಲಹೆ ಹಾಗೂ ಆಕ್ಷೇಪಣೆ ಸ್ವೀಕರಿಸಿದ ನಂತರ ಪರಿಶೀಲನೆ ನಡೆಸಿ ನಿಯಮಗಳನ್ನು ಅಂತಿಮಗೊಳಿಸಿ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

’ಈ ಪ್ರಕರಣದಲ್ಲಿ ಸಿಡಬ್ಲುಸಿಗೆ ಒಪ್ಪಿಸಲಾಗಿದ್ದ ಮಗುವನ್ನು ದತ್ತು ಪಡೆಯಲು ಬೇರೊಬ್ಬರು ಮುಂದೆ ಬಂದಿದ್ದರು. ಅದ ರಂತೆ 2021ರ ನವೆಂಬರ್ 15ರಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಿಂದ ಆದೇಶ ಪಡೆದು ಆ ದಂಪತಿಗೆ ಮಗುವನ್ನು ದತ್ತು ನೀಡಲಾಗಿದೆ’ ಎಂದು ವಿವರಿಸಿದರು.

ಸಹಜೀವನ ನಡೆಸಿದ್ದ ಅವಿವಾಹಿತ ಜೋಡಿಯೊಂದು, ತಮ್ಮ 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಈ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರ ಸಂಸ್ಥೆ ಲೆಟ್ಜ್‌ ಕಿಟ್ ಫೌಂಡೇಷನ್ ಪರ ಹಿರಿಯ ವಕೀಲ ರಮೇಶ್ ಪುತ್ತಿಗೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.