ADVERTISEMENT

ಸೈಬರ್‌ ಅಪರಾಧ:ತನಿಖಾ ಬ್ಯೂರೊ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

ಸೈಬರ್ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 22:42 IST
Last Updated 28 ಏಪ್ರಿಲ್ 2025, 22:42 IST
ನಗರದಲ್ಲಿ ಇನ್ನಷ್ಟು ಕ್ರೀಡಾಂಗಣ ನಿರ್ಮಿಸಿ ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ
ನಗರದಲ್ಲಿ ಇನ್ನಷ್ಟು ಕ್ರೀಡಾಂಗಣ ನಿರ್ಮಿಸಿ ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ   

ಬೆಂಗಳೂರು: ‘ಸೈಬರ್‌ ಅಪರಾಧಗಳನ್ನು ನಿಭಾಯಿಸುವಲ್ಲಿ ಸಾಂಪ್ರದಾಯಿಕ ಪೊಲೀಸಿಂಗ್‌ ವಿಧಾನಗಳು ನಿರೀಕ್ಷಿತ ಕ್ಷಮತೆಯಿಂದ ಕೂಡಿಲ್ಲ’ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ನಿಟ್ಟಿನಲ್ಲಿ ಸೈಬರ್‌ ಅಪರಾಧಗಳಿಗೆ ಎಂದೇ ಮೀಸಲಾದ ‘ಸೈಬರ್‌ ಅಪರಾಧಗಳ ತನಿಖಾ ಬ್ಯೂರೊ‘ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.

‘ಡ್ರೋನ್‌ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ತನಿಖೆಗಾಗಿ ಎಸ್ಐಟಿ (ವಿಶೇಷ ತನಿಖಾ ತಂಡ) ರಚಿಸಲುನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರಿನ, ‘ನ್ಯೂ ಸ್ಪೇಸ್‌ ರಿಸರ್ಚ್‌ ಅಂಡ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಯ ಅಧಿಕೃತ ಪ್ರತಿನಿಧಿ ಭಾವನಾ ವಿಜಯಕುಮಾರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪುರಸ್ಕರಿಸಿ ರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.

ಅಂತೆಯೇ, ಪ್ರಕರಣ ಸಂಬಂಧ ಮರು ತನಿಖೆ ನಡೆಸಲು ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್‌ ಮೊಹಂತಿ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿಗಳಾದ ಭೂಷಣ್‌ ಗುಲಾಬ್‌ ಬೊರಾಸೆ ಮತ್ತು ನಿಶಾ ಜೇಮ್ಸ್‌ ಅವರ ತನಿಖಾ ತಂಡ ರಚಿಸಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

ADVERTISEMENT

‘ಎಸ್‌ಐಟಿ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಈ ತೀರ್ಪಿನ ಪ್ರತಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಕಾರ್ಯದರ್ಶಿಗೆ ರವಾನಿಸಬೇಕು’ ಎಂದು ತಾಕೀತು ಮಾಡಿದೆ. 

‘ಹಾಲಿ ಇರುವ ಸೈಬರ್‌ ಅಪರಾಧಗಳ ತನಿಖೆಯಿಂದ ನಿರೀಕ್ಷಿತ ಪ್ರಮಾಣದ ಪ್ರಯೋಜನವಾಗುತ್ತಿಲ್ಲ. ಸಾಕಷ್ಟು ತನಿಖಾಧಿಕಾರಿಗಳಿಗೆ ತಾಂತ್ರಿಕ ನೈಪುಣ್ಯವೇ ಇಲ್ಲ. ಹಾಗಾಗಿ, ತಾಂತ್ರಿಕ ಪರಿಣತಿ ಮತ್ತು ವಿಧಿವಿಜ್ಞಾನಗಳ ಕುಶಾಗ್ರಮತಿ ಹೊಂದಿದ ಅಧಿಕಾರಿಗಳು ಮಾತ್ರ ಉದಯೋನ್ಮುಖ ಡಿಜಿಟಲ್‌ ಹಾಗೂ ಸೈಬರ್‌ ಅಪರಾಧಗಳ ತನಿಖೆ ಮಾಡುವಂತಾಗಬೇಕು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಬಟನ್‌ ಕ್ಲಿಕ್‌ ಮಾಡಿದರೆ ಸಾಕು...!

‘ಮಾಹಿತಿಯೇ ಆಧುನಿಕ ನಾಗರಿಕತೆಯ ಜೀವನಾಡಿಯಾಗಿರುವ ಇಂದಿನ ಆಧುನಿಕ ಯುಗದಲ್ಲಿ ಸೈಬರ್‌ ಅಪರಾಧಗಳು ಜಟಿಲವಾಗಿರುತ್ತವೆ. ಇದಕ್ಕೆ ತಕ್ಕಂತೆ ತನಿಖಾಧಿಕಾರಿಗಳೂ ಸಮರ್ಥರಾಗಿರಬೇಕು. ಡಿಜಿಟಲ್‌ ಜಗತ್ತಿನಲ್ಲಿ ಕುಳಿತವರು ಕೇವಲ ಬಟನ್‌ ಕ್ಲಿಕ್‌ ಮಾಡಿ ಏನು ಬೇಕಾದರೂ ಅವಾಂತರ ಸೃಷ್ಟಿಸಬಹುದು. ಸೈಬರ್‌ ಅಪರಾಧಗಳನ್ನು ಹತ್ತಿಕ್ಕಲು ಸರ್ಕಾರ ಕಮಾಂಡ್‌ ಸೆಂಟರ್‌ ಆರಂಭಿಸಿದ್ದರೂ ಅದು ಸಾಲದು. ಹಾಗಾಗಿ, ಸಿಸಿಬಿಯಂತೆ ಸೈಬರ್‌ ಅಪರಾಧದ ತನಿಖೆಗೆ ಬ್ಯೂರೊ ರಚಿಸುವುದು ಸೂಕ್ತ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.

ಇತ್ತೀಚೆಗೆ ಹೊಸ ಬಗೆಯ ಸೈಬರ್‌ ಬೇಹುಗಾರಿಕೆಯ ಅಪರಾಧಗಳು ಹೆಚ್ಚುತ್ತಿದ್ದು, ಇವು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.