ADVERTISEMENT

30 ಜಿಲ್ಲೆಗಳಲ್ಲಿ ಸೈಬರ್‌ ಕ್ರೈಂ ತರಬೇತಿ ಕೇಂದ್ರ

ಹೆಚ್ಚುತ್ತಿರುವ ಹ್ಯಾಕರ್‌ಗಳು, ಕಾನ್‌ಸ್ಟೇಬಲ್, ಇನ್‌ಸ್ಪೆಕ್ಟರ್‌ಗಳಿಗೆ‌ ತರಬೇತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:01 IST
Last Updated 28 ಫೆಬ್ರುವರಿ 2019, 20:01 IST
   

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಚಟುವಟಿಕೆಗಳು ಅಧಿಕವಾಗಿ ವರದಿಯಾಗುತ್ತಿದ್ದು, ಅವುಗಳಿಗೆ ಮಟ್ಟ ಹಾಕಲು ಪೊಲೀಸ್‌ ಇಲಾಖೆಯಿಂದ ಅತ್ಯಾಧುನಿಕ ‘ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ’ವನ್ನು‌ ಸ್ಥಾಪಿಸಲಾಗಿದೆ.

ಐಟಿ–ಬಿಟಿ ಕಂಪನಿಗಳ, ಫೇಸ್‌ಬುಕ್, ವಾಟ್ಸ್‌ ಆ್ಯಪ್‌ಗಳ ಮತ್ತು ಸರ್ಕಾರದ ಮಾಹಿತಿಯನ್ನು ಹ್ಯಾಕ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಹೀಗಾಗಿ ಡೇಟಾ ಸೆಕ್ಯುರಿಟಿ ಬಗ್ಗೆ ಮಾಹಿತಿ ಪಡೆಯಲು ಮತ್ತು ಅವುಗಳ ನಿಯಂತ್ರಣಕ್ಕೆಈ ಕೇಂದ್ರದಲ್ಲಿ ತರಬೇತಿ ದೊರೆಯಲಿದೆ.

ಯಾರ‍್ಯಾರಿಗೆ ತರಬೇತಿ: ಈ ಕೇಂದ್ರದಲ್ಲಿ ಕಾನ್‌ಸ್ಟೇಬಲ್, ಇನ್‌ಸ್ಪೆಕ್ಟರ್‌ಗಳಿಗೆ‌ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ನೂತನವಾಗಿ ಪೊಲೀಸ್‌ ಇಲಾಖೆಗೆ ಸೇರುವ ಕಾನ್‌ಸ್ಟೆಬಲ್‌, ಕಾನೂನು ವಿದ್ಯಾರ್ಥಿಗಳಿಗೆ, ನ್ಯಾಯಾಧೀಶರು ಮತ್ತು ವಕೀಲರಿಗೆ ತರಬೇತಿ ಸಿಗಲಿದೆ.

ADVERTISEMENT

ಗೃಹ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ರಾಜ್ಯದ 30 ಜಿಲ್ಲೆಗಳಲ್ಲಿ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಇದೆ. ಬೆಂಗಳೂರಿನಲ್ಲಿ ಎಂಟು ಕಡೆ ಸ್ಥಾಪಿಸಲು ಬಜೆಟ್‌ನಲ್ಲಿ ₹ 4 ಕೋಟಿ ಒದಗಿಸಲಾಗಿದೆ. ಹಂತ ಹಂತವಾಗಿ ನಗರದ ಪ್ರತಿಯೊಂದು ಠಾಣೆಯಲ್ಲೂ ನಿರ್ಮಿಸಲಿದ್ದೇವೆ’ ಎಂದು ಹೇಳಿದರು.

ಸಿಐಡಿ ಡಿಜಿಪಿ ಪ್ರವೀಣ್‌ ಸೂದ್‌, ‘ಈ ಹಿಂದೆ ತರಬೇತಿಗಾಗಿ ಬೇರೆ ದೇಶಗಳಿಗೆ ಹೋಗಬೇಕಾಗಿತ್ತು. ಈಗ ಇಲ್ಲಿಯೇ ತರಬೇತಿ ದೊರೆಯಲಿದೆ’ ಎಂದರು.

ಕೇಂದ್ರವನ್ನು‌‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಉದ್ಘಾಟಿಸಿದರು. ತರಬೇತಿಗೆ ಮತ್ತು ಸಂಶೋಧನೆಗೆ‌ ಬೇಕಾದ ಪರಿಕರಗಳ ಖರ್ಚನ್ನು 5 ವರ್ಷಗಳವರೆಗೂ ಇನ್ಫೊಸಿಸ್ ಪ್ರತಿಷ್ಠಾನವೇ ಭರಿಸಲಿದೆ. ಅಲ್ಲದೆ, 60 ದಿನಗಳಲ್ಲಿ ₹ 22 ಕೋಟಿ ವೆಚ್ಚದಲ್ಲಿ ಉನ್ನತ ಸಲಕರಣೆಗಳನ್ನು
ಅಳವಡಿಸಿ ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಿತು.

‘ಗಂಭೀರ ಕ್ರಮ ಕೈಗೊಳ್ಳಿ’

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತೀವ್ರಗತಿಯ ಬೆಳವಣಿಗೆಯ ಜತೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ. ನಿಯಂತ್ರಣಕ್ಕೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

***

ಡೇಟಾ ಹ್ಯಾಕ್‌ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳ ತಡೆಗೆ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಬೇಕು.

–ಎಂ.ಬಿ.‍ಪಾಟೀಲ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.