ADVERTISEMENT

ಡಿ.ಕೆ. ಶಿವಕುಮಾರ್‌ ಜಾಮೀನು ಅರ್ಜಿ ವಜಾ

ಪ್ರಗತಿಯಲ್ಲಿರುವ ತನಿಖೆ: ಇ.ಡಿ. ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:23 IST
Last Updated 25 ಸೆಪ್ಟೆಂಬರ್ 2019, 19:23 IST
   

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಬಂಧನಕ್ಕೆ ಒಳಗಾಗಿ, ತಿಹಾರ್‌ ಕೇಂದ್ರ ಕಾರಾಗೃಹದಲ್ಲಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

‘ಸೆಪ್ಟೆಂಬರ್‌ 3ರಂದು ಬಂಧನಕ್ಕೆ ಒಳಗಾಗಿರುವ ಶಿವಕುಮಾರ್‌ ವಿರುದ್ಧದ ತನಿಖೆ ಆರಂಭಿಕ ಹಂತ
ದಲ್ಲಿದೆ. ಪ್ರಭಾವಿಯಾಗಿರುವ ಆರೋಪಿಯು ಒಟ್ಟು 317 ಬ್ಯಾಂಕ್‌ ಖಾತೆ ಹೊಂದಿದ್ದು, ವಿಚಾರಣೆ ಬಾಕಿ ಇರುವುದರಿಂದ ಜಾಮೀನು ನೀಡಲಾಗದು’ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹಾರ್‌ ಬುಧವಾರ ಪ್ರಕಟಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ತನಿಖೆಗೆ ನ್ಯಾಯ ಸಮ್ಮತ ಅವಕಾಶ ದೊರೆತರೆ ಮಾತ್ರ ತಾರ್ಕಿಕ ನಿರ್ಧಾರ ಕೈಗೊಳ್ಳಲು ಸಾಧ್ಯ. ನಿರ್ಣಾಯಕ ಹಂತದಲ್ಲಿ ಜಾಮೀನು ನೀಡಿದಲ್ಲಿ ತನಿಖೆಗೆ ಅಡ್ಡಿಯಾಗಬಹುದು. ಆರೋಪಿಯು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಲಾಗದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಆರೋಗ್ಯ ಸಮಸ್ಯೆ ಮುಂದಿರಿಸಿ ಜಾಮೀನು ಕೋರಲಾಗಿದೆ. ಆದರೆ, ಅಪರಾಧದ ಸ್ವರೂಪ ಮತ್ತು ತನಿಖೆಯ ಹಂತವನ್ನು ಪರಿಗಣಿಸಿ ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಆರೋಪಿಯ ಆರೋಗ್ಯ ಸ್ಥಿತಿ ಸರಿಯಾಗಿದೆ ಎಂದು ತಜ್ಞ ವೈದ್ಯರು ಸಲ್ಲಿಸಿರುವ ವರದಿ ತಿಳಿಸಿದೆ. ಒಂದೊಮ್ಮೆ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕಾರಾಗೃಹದ ಅಧೀಕ್ಷಕರು ತಕ್ಷಣವೇ ಏಮ್ಸ್‌ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಜಾಮೀನು ನೀಡುವ ಮುನ್ನ ಆರೋಪಿಯ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ, ಸಮಾಜದ ಸ್ವಾಸ್ಥ್ಯವನ್ನೂ ಪರಿಗಣಿಸುವ ಅಗತ್ಯವಿದೆ. ಹಾಗೆ ಮಾಡದಿದ್ದರೆ ಸಾಮಾಜಿಕ ಅಸಮತೋಲನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಶಿವಕುಮಾರ್‌ ಹಾಗೂ ಅವರ ಸಂಬಂಧಿಗಳು ಹರಾಜು ಪ್ರಕ್ರಿಯೆಯಲ್ಲೇ ಅತ್ಯಂತ ಕಡಿಮೆ ದರಕ್ಕೆ ಸಾಕಷ್ಟು ಆಸ್ತಿ ಖರೀದಿಸಿದ್ದಾರೆ. ಅಪಾರ ಆಸ್ತಿ ಸಂಪಾದನೆಗಾಗಿ ಅಕ್ರಮ ಹಣ ತೊಡಗಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಕುರಿತ ತನಿಖೆಗೆ ಮುಕ್ತ ಅವಕಾಶ ಬೇಕು ಎಂದು ತನಿಖಾಧಿಕಾರಿಗಳು ಮನವಿ ಮಾಡಿದ್ದಾರೆ ಎಂದು 31 ಪುಟಗಳ ಆದೇಶದಲ್ಲಿ ಹೇಳಲಾಗಿದೆ. ₹ 143 ಕೋಟಿ ಹಣವು ಕೈ ಬದಲಾಯಿಸಿದೆ.

ದೆಹಲಿಯ ನಿವಾಸದಲ್ಲಿ ದೊರೆತಿರುವ ₹ 8.59 ಕೋಟಿ ನಗದು ಈ ರೀತಿ ಅಕ್ರಮವಾಗಿ ವರ್ಗಾವಣೆಗೊಂಡ ಹಣವೇ ಆಗಿದೆ. ಇಂಥ ಸಾಕಷ್ಟು ವ್ಯವಹಾರಗಳು ನಡೆದಿದ್ದು, ಸಮಗ್ರ ವಿಚಾರಣೆ ನಡೆಸಬೇಕಿದೆ ಎಂದು ಇ.ಡಿ. ಹೇಳಿದ್ದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.