ADVERTISEMENT

ಡಿ. ಫಾರ್ಮಸಿ ಅಕ್ರಮ: ಪರೀಕ್ಷಾ ಮಂಡಳಿ ಭಾಗಿ

ಚೀಫ್‌ ಕಸ್ಟೋಡಿಯನ್, ಸದಸ್ಯ ಕಾರ್ಯದರ್ಶಿ ಸೇರಿ ಎಂಟು ಮಂದಿ ಅಮಾನತು

ರಾಜೇಶ್ ರೈ ಚಟ್ಲ
Published 1 ಏಪ್ರಿಲ್ 2025, 22:25 IST
Last Updated 1 ಏಪ್ರಿಲ್ 2025, 22:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಡಿಪ್ಲೊಮಾ ಇನ್ ಫಾರ್ಮಸಿ (ಡಿ. ಫಾರ್ಮಸಿ) ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಪತ್ತೆಯಾಗಿದ್ದು, ಈ ಸಂಬಂಧ ಎಂಟು ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದೆ. 

ರಾಜ್ಯ ಔಷಧ ಇಲಾಖೆ ಡಿ. ಫಾರ್ಮಸಿ ವಾರ್ಷಿಕ ಪರೀಕ್ಷೆ ನಡೆಸಿತ್ತು. ಪರೀಕ್ಷೆಯನ್ನೇ ಬರೆಯದ ವಿದ್ಯಾರ್ಥಿಗಳ  ಉತ್ತರ ಪತ್ರಿಕೆಗಳು ಮೌಲ್ಯಮಾಪನದ ವೇಳೆ ಪತ್ತೆಯಾಗಿದ್ದವು. ಚೀಫ್ ಕಸ್ಟೋಡಿಯನ್, ಪರೀಕ್ಷಾ ಪ್ರಾಧಿಕಾರ ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಈ ಅಕ್ರಮದಲ್ಲಿ ಕೈಜೋಡಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. 

ADVERTISEMENT

2023ರ ಜನವರಿಯಲ್ಲಿ ನಡೆದ ಪರೀಕ್ಷೆಗೆ ಗೈರಾಗಿದ್ದ 104 ವಿದ್ಯಾರ್ಥಿಗಳ 397 ಉತ್ತರ ಪತ್ರಿಕೆಗಳು ಮೌಲ್ಯಮಾಪನ ವೇಳೆ ಪ್ರತ್ಯಕ್ಷವಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದಾಗ ಕೆಲವು ಉತ್ತರ ಪತ್ರಿಕೆಗಳು ಮತ್ತು ಬಾರ್‌ ಕೋಡ್‌ಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಕ್ರಮ ನಡೆದಿರುವುದು ಮೊದಲ ಹಂತದಲ್ಲಿ ಗೊತ್ತಾಗಿತ್ತು. ತನಿಖೆಯ ಬಳಿಕ, ಪರೀಕ್ಷಾ ಮೇಲ್ವಿಚಾರಕರ ಡೈರಿ ತಿದ್ದಿರುವುದು, ಸಿ.ಸಿ.ಟಿ.ವಿ ಕ್ಯಾಮೆರಾ ತುಣುಕುಗಳನ್ನು ಅಳಿಸಿ ಹಾಕಿರುವುದು, ಹಿಂದಿನ ವರ್ಷದ ಉತ್ತರ ಪತ್ರಿಕೆಗಳನ್ನು ಹಿಂದಿರುಗಿಸದಿರುವುದು ಸೇರಿದಂತೆ ಹಲವು ಅಕ್ರಮಗಳು ಪರೀಕ್ಷಾ ಪ್ರಾಧಿಕಾರ ಮಂಡಳಿಯಲ್ಲಿ ನಡೆದಿರುವುದು ದೃಢಪಟ್ಟಿದೆ.

ಅಕ್ರಮ ನಡೆದ ಸಂಶಯದ ಮೇಲೆ, ಮೊದಲು ಆಂತರಿಕ ತನಿಖೆ ನಡೆಸಿದ್ದ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ವಿಜಯ ಜಿ. ಜೋಷಿ ನೇತೃತ್ವದ ಮೂವರು ಸದಸ್ಯರ ಸಮಿತಿಯು ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಪೂರ್ಣ ವರದಿ ನೀಡಿತ್ತು. ಈ ಕಾರಣಕ್ಕೆ, ರಾಜ್ಯ ಏಡ್ಸ್‌ ನಿಯಂತ್ರಣಾ ಸಂಸ್ಥೆಯ ಯೋಜನಾ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಎನ್‌.ಎಂ. ನಾಗರಾಜು ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು.

ವರದಿಯಲ್ಲಿ ಏನಿದೆ?

ಪರೀಕ್ಷಾ ಕೇಂದ್ರಗಳಿಂದ ಸ್ವೀಕೃತವಾದ ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ಚೀಫ್ ಕಸ್ಟೋಡಿಯನ್‌ ಚಂದ್ರಶೇಖರ್‌ ಸುಲ್ತಾನಪುರೆ ನಿಖರವಾಗಿ ದಾಖಲಿಸಿಲ್ಲ. ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿಡಲಾಗಿದ್ದ ಸ್ಟ್ರಾಂಗ್‌ ರೂಮ್‌ನ ಸುರಕ್ಷತೆಗೆ ಕ್ರಮ ತೆಗೆದುಕೊಂಡಿಲ್ಲ. ಸ್ಟ್ರಾಂಗ್‌ ರೂಮ್‌ ಕೀಯನ್ನು ತನ್ನ ಬಳಿ ಇಟ್ಟುಕೊಳ್ಳುವ ಬದಲು ಇತರರಿಗೆ ಉದ್ದೇಶಪೂರ್ವಕವಾಗಿಯೇ ಅವರು ನೀಡಿದ್ದರು ಎಂದು ವರದಿಯಲ್ಲಿದೆ. 

ಪರೀಕ್ಷಾ ಪ್ರಾಧಿಕಾರ ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ಬಸವರಾಜ ಆಸಂಗಿ ಅವರು ಸಿ.ಸಿ.ಟಿ.ವಿ ಕ್ಯಾಮೆರಾ ತುಣುಕುಗಳನ್ನು ನಾಶ ಮಾಡುವ ಮೂಲಕ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿರುವುದು ಕಂಡುಬಂದಿದೆ. ಕಾಲೇಜುಗಳ ಮುಖ್ಯಸ್ಥರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಕೂಡಾ ದುರುದ್ದೇಶದಿಂದಲೇ ಹಿಂದಿನ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಹಿಂದಿರುಗಿಸಿಲ್ಲ. ಪರೀಕ್ಷಾ ಕಾರ್ಯಗಳ ಮೇಲ್ವಿಚಾರಣೆ ಮಾಡದೆ, ಆಸಂಗಿ ಅವರು ಅಕ್ರಮಗಳಿಗೆ ಸಹಕರಿಸಿರುವ ಸಾಧ್ಯತೆಯಿದೆ ಎಂದೂ ವರದಿಯಲ್ಲಿದೆ.

‘ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್‌ ರೂಮ್‌ಗೆ ನಾನು ಪ್ರವೇಶಿಸಿಲ್ಲ’ ಎಂದು ಪತ್ರಾಂಕಿತ ಸಹಾಯಕ ಕೆ.ಎನ್‌. ಕೃಷ್ಣ ನಾಯಕ್ ಹೇಳಿಕೆ ನೀಡಿದ್ದರು. ಆದರೆ, ಅವರು ಸ್ಟ್ರಾಂಗ್‌ ರೂಮ್ ಪ್ರವೇಶಿಸಿರುವುದು ದೃಢಪಟ್ಟಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ವೇಳೆ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಸದಸ್ಯ ಕಾರ್ಯದರ್ಶಿಯು ಹಾರ್ಡ್‌ ಡಿಸ್ಕ್‌ನಲ್ಲಿದ್ದ ದತ್ತಾಂಶಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿರುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ.

ಪರೀಕ್ಷಾ ಅಕ್ರಮದ ಪರಿ...

l 2022ರ ಮಾರ್ಚ್‌, ಸೆಪ್ಟೆಂಬರ್‌ ಪರೀಕ್ಷೆಯ ಉತ್ತರಪತ್ರಿಕೆ 2023ರ
ವಾರ್ಷಿಕ ಪರೀಕ್ಷೆಗೆ ಅಕ್ರಮವಾಗಿ ಬಳಕೆ

l ಪರೀಕ್ಷೆಗೆ ಗೈರಾದ 104 ವಿದ್ಯಾರ್ಥಿಗಳ 397 ಉತ್ತರಪತ್ರಿಕೆ
ಮೌಲ್ಯಮಾಪನ ವೇಳೆ ಪ್ರತ್ಯಕ್ಷ

l ಖಾಸಗಿ ಫಾರ್ಮಸಿ ಸಂಸ್ಥೆಗಳ ಅಕ್ರಮಕ್ಕೆ ಕೈಜೋಡಿಸಿದ ಪರೀಕ್ಷಾ ಪ್ರಾಧಿಕಾರ ಮಂಡಳಿ

l ಐಎಎಸ್‌ ಅಧಿಕಾರಿ ನಡೆಸಿದ ತನಿಖೆಯಲ್ಲಿ ಪರೀಕ್ಷಾ ಅಕ್ರಮ ಬಹಿರಂಗ

ಏಜೆಂಟ್‌ಗೆ ಹಣ ನೀಡಿದ್ದ ಪರೀಕ್ಷಾರ್ಥಿ

ಕೊರಟಗೆರೆಯ ಪ್ರಕೃತಿ ಕಾಲೇಜ್‌ ಆಫ್‌ ಫಾರ್ಮಸಿ ಮತ್ತು ಪ್ರಿಯದರ್ಶಿನಿ ಕಾಲೇಜು ಆಫ್‌ ಫಾರ್ಮಸಿ ಸಂಸ್ಥೆಯವರು ಮಾರ್ಚ್‌ 2022 ಮತ್ತು ಸೆಪ್ಟೆಂಬರ್‌ 2022ರ ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಮಂಡಳಿಗೆ ಹಿಂದಿರುಗಿಸಿರುವುದಾಗಿ ತಪ್ಪು ಮಾಹಿತಿ ನೀಡಿದ್ದರು. ಅದೇ ಉತ್ತರ ಪತ್ರಿಕೆಗಳು 2023ರ ಜನವರಿಯಲ್ಲಿ ನಡೆದ ಪರೀಕ್ಷೆಗೆ ಬಳಕೆಯಾಗಿದೆ. ಪ್ರಾಥಮಿಕ ತನಿಖೆಗೆ ಹಾಜರಾಗಿದ್ದ ಇಬ್ಬರು ವಿದ್ಯಾರ್ಥಿಗಳು, ಅಫ್ಜಲ್‌ ಎಂಬ ಏಜೆಂಟ್‌ಗೆ ಹಣ ನೀಡಿ ಪರೀಕ್ಷೆ ಬರೆದಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದರು ಎಂದೂ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ಯಾರೆಲ್ಲ ಅಮಾನತು

l ಚಂದ್ರಶೇಖರ ಎಂ. ಸುಲ್ತಾನಪುರೆ, ಚೀಫ್‌ ಕಸ್ಟೋಡಿಯನ್‌ (ಪ್ರಸ್ತುತ ಪ್ರಾಧ್ಯಾಪಕರು, ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ)

l ಬಸವರಾಜ ಆಸಂಗಿ, ಹಿಂದಿನ ಸದಸ್ಯ ಕಾರ್ಯದರ್ಶಿ, ಪರೀಕ್ಷಾ ಪ್ರಾಧಿಕಾರ ಮಂಡಳಿ (ಪ್ರಸ್ತುತ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯಲ್ಲಿ ಉಪ ಔಷಧ ನಿಯಂತ್ರಕ)

l ಬಸವರಾಜ ಎಚ್., ಸಹಾಯಕ ಪ್ರಾಧ್ಯಾಪಕರು

l ಶಾಂತಾರಾಮ್‌ ಯು., ಸಹಾಯಕ ಪ್ರಾಧ್ಯಾಪಕರು

l ಅನಿತಾ ಕೆ.ಎನ್‌., ಸಹಾಯಕ ಪ್ರಾಧ್ಯಾಪಕರು

l ಸ್ವಪ್ನಾ ಬಿ., ಸಹಾಯಕ ಪ್ರಾಧ್ಯಾಪಕರು

l ಕೃಷ್ಣ ನಾಯಕ್ ಕೆ.ಎನ್‌. ಪತ್ರಾಂಕಿತ ಸಹಾಯಕರು, ಕೇಂದ್ರ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.