ADVERTISEMENT

ದಲಿತರ ₹39,000 ಕೋಟಿ ಅನ್ಯ ಉದ್ದೇಶಕ್ಕೆ ಬಳಕೆ: ಛಲವಾದಿ ನಾರಾಯಣಸ್ವಾಮಿ

ಅನುದಾನ ಇಲ್ಲದ ಕಾರಣ ಪರಿಶಿಷ್ಟರ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 14:14 IST
Last Updated 31 ಜುಲೈ 2025, 14:14 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ಪರಿಶಿಷ್ಟ ಜಾತಿಗಳ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪಯೋಜನೆ (ಟಿಎಸ್‌ಪಿ) ಅನುದಾನದಲ್ಲಿ ₹39,000 ಕೋಟಿಗೂ ಹೆಚ್ಚು ಮೊತ್ತವನ್ನು, ಅನ್ಯ ಉದ್ದೇಶಕ್ಕೆ ಬಳಸುವ ತೀರ್ಮಾನವನ್ನು ಸರ್ಕಾರ ಕೈಬಿಡಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಸಮುದಾಯಗಳ ಜನರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೇರ ಸಹಾಯ ಒದಗಿಸುವುದು ಈ ಉಪಯೋಜನೆಗಳ ಗುರಿ. ಯೋಜನೆಗಳ ಅಡಿಯಲ್ಲಿ ಸರ್ಕಾರವು ಕೌಶಲಾಭಿವೃದ್ಧಿ, ಉದ್ಯೋಗಾರ್ಹತೆ ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆ ವೃದ್ಧಿ, ಕೃಷಿಗೆ ತಂತ್ರಜ್ಞಾನದ ಬೆಂಬಲ ಸೇರಿ ಹಲವು ಕಾರ್ಯಕ್ರಮಗಳನ್ನು ಆರಂಭಿಸಬೇಕಿತ್ತು. ಅನುದಾನವೇ ಇಲ್ಲವಾಗಿರುವುದರಿಂದ ಈ ಎಲ್ಲ ಕಾರ್ಯಕ್ರಮಗಳು ಸ್ಥಗಿತವಾಗಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪರಿಶಿಷ್ಟ ಸಮುದಾಯಗಳ ಜನರ ಸಬಲೀಕರಣಕ್ಕೆಂದು ತೆಗೆದಿರಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಾ ಹೋದರೆ, ಈ ಜನರು ಅಭಿವೃದ್ಧಿಯಾಗುವುದಾದರೂ ಹೇಗೆ. ಈ ಜನರ ಹಣವನ್ನು ಬಳಸಿಕೊಳ್ಳುವ ಮೂಲಕ ಸರ್ಕಾರವು ಅವರ ಅಭಿವೃದ್ಧಿಯನ್ನು ನಿರಾಕರಿಸುತ್ತಿದೆ’ ಎಂದು ದೂರಿದರು.

ADVERTISEMENT

‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದರ ವಿರುದ್ಧ 2023ರಿಂದಲೂ ಹೋರಾಡುತ್ತಿದ್ದೇನೆ. ಈಗ ಸದನದ ಒಳಗೂ, ಹೊರಗೂ ತೀವ್ರ ಹೋರಾಟ ನಡೆಸುತ್ತೇವೆ’ ಎಂದರು.

ತಾನು ದಲಿತ ಪರ ಎಂದು ಹೇಳಿಕೊಳ್ಳುವ ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲಿನ ತಮ್ಮದೇ ಸರ್ಕಾರದ ಈ ನಡೆಯ ವಿರುದ್ಧ ಹೋರಾಡುವುದು ಯಾವಾಗ?
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.