ADVERTISEMENT

ಗೊಲ್ಲರಹಟ್ಟಿಗೆ ದಲಿತ ಯುವಕ ಪ್ರವೇಶ: ದೇಗುಲಕ್ಕೆ ಬೀಗ

ವಿಜಯಕುಮಾರ್ ಎಸ್.ಕೆ.
Published 5 ಜನವರಿ 2024, 0:30 IST
Last Updated 5 ಜನವರಿ 2024, 0:30 IST
<div class="paragraphs"><p>ಗೇರುಮರಡಿ ಗೊಲ್ಲರಹಟ್ಟಿಯಲ್ಲಿರುವ ಕಂಬದ ರಂಗನಾಥಸ್ವಾಮಿ ದೇಗುಲಕ್ಕೆ ಬೀಗ ಹಾಕಲಾಗಿದೆ</p></div>

ಗೇರುಮರಡಿ ಗೊಲ್ಲರಹಟ್ಟಿಯಲ್ಲಿರುವ ಕಂಬದ ರಂಗನಾಥಸ್ವಾಮಿ ದೇಗುಲಕ್ಕೆ ಬೀಗ ಹಾಕಲಾಗಿದೆ

   

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಗೇರುಮರಡಿ ಗೊಲ್ಲರಹಟ್ಟಿಗೆ ಮಾದಿಗ ಸಮುದಾಯದ ಯುವಕ ಮಾರುತಿ ಪ್ರವೇಶ ಮಾಡಿದ ಕಾರಣಕ್ಕೆ ಹಟ್ಟಿಯಲ್ಲಿರುವ ಎರಡು ದೇಗುಲಗಳಿಗೆ ಬೀಗ ಬಿದ್ದಿದ್ದು, ಮೂರು ದಿನಗಳಿಂದ ಪೂಜೆ ಸ್ಥಗಿತಗೊಂಡಿದೆ.

ಪರಿಶಿಷ್ಟ ಜಾತಿಯವರು ಹಟ್ಟಿ ಪ್ರವೇಶ ಮಾಡಿದರೆ ದೇವರಿಗೆ ಮೈಲಿಗೆಯಾಗುತ್ತದೆ ಎಂಬ ನಂಬಿಕೆ ಹಟ್ಟಿಯ ಜನರಲ್ಲಿದೆ.ಜೆಸಿಬಿ ಆಪರೇಟರ್ ಆಗಿರುವ ಎಂ.ಸಿ.ಹಳ್ಳಿಯ ಮಾರುತಿ ಎಂಬ ಯುವಕ ಗೇರುಮರಡಿ ಗ್ರಾಮದ ರವಿ ಎಂಬವರ ಹಳೇ ಮನೆಯ ಮಣ್ಣು ತುಂಬಿಸುವ ಕೆಲಸಕ್ಕೆ ಜ.1ರಂದು ಹೊಗಿದ್ದರು. ಜೆಸಿಬಿ ಹೋಗುವಾಗ ಡಿಷ್ ಕೇಬಲ್ ತುಂಡಾಗಿದ್ದರಿಂದ ಗೊಲ್ಲರಹಟ್ಟಿಯ ಶಂಕರಪ್ಪ ನಡುವೆ ಜಗಳ ಆರಂಭವಾಯಿತು.

ADVERTISEMENT

‘ನಾನು ಮಾದಿಗ ಸಮುದಾಯಕ್ಕೆ ಸೇರಿದವನು ಎಂಬುದು ಗೊತ್ತಾದ ಬಳಿಕ 30–40 ಜನ ಜೆಸಿಬಿಯಿಂದ ಎಳೆದು ಹಲ್ಲೆ ನಡೆಸಿದರು’ ಎಂದು ತರೀಕೆರೆ ಪೊಲೀಸ್ ಠಾಣೆಗೆ ಮಾರುತಿ ದೂರು ನೀಡಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಶಂಕರಪ್ಪ ಎಂಬ ಆರೋಪಿಯ ಬಂಧನವಾಗಿದೆ. 

ಈ ಘಟನೆ ಬಳಿಕ ದಲಿತ ಸಂಘಟನೆಗಳ ಮುಖಂಡರು ಗ್ರಾಮಕ್ಕೆ ನಿತ್ಯ ಭೇಟಿ ನೀಡಿ ಹಟ್ಟಿಯಲ್ಲಿ ಓಡಾಡುತ್ತಿದ್ದಾರೆ. ಇದಾದ ಬಳಿಕ ಹಟ್ಟಿಯಲ್ಲಿರುವ ಕಂಬದ ರಂಗನಾಥಸ್ವಾಮಿ ಮತ್ತು ತಿಮ್ಮಪ್ಪನ ದೇಗುಲಗಳಲ್ಲಿ ಪೂಜೆ ಸ್ಥಗಿತಗೊಂಡಿದೆ. ಎರಡು ಗುಡಿಗೂ ಬೀಗ ಹಾಕಲಾಗಿದೆ.

ಹಟ್ಟಿಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಜತೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಗೊಲ್ಲರಹಟ್ಟಿ ಮಹಿಳೆಯರು, ‘ಈ ಎರಡು ದೇವರ ಮೇಲೆ ಊರಿನ ಜನರಿಗೆ ಇನ್ನಿಲ್ಲದ ಭಕ್ತಿ ಇದೆ. ಯಾವುದೇ ಸಮುದಾಯದವರಾದರೂ ಬಂದು ದೇವರಿಗೆ ಕೈಮಗಿಯಬಹುದು. ಆದರೆ, ಆದಿ ಕರ್ನಾಟಕ ಜಾತಿಯವರು ಮಾತ್ರ ಬೀದಿ ಪ್ರವೇಶ ಮಾಡುವಂತಿಲ್ಲ. ಪ್ರವೇಶ ಮಾಡಿದರೆ ಅವರಿಗೇ ದೇವರು ಒಳ್ಳೆಯದು ಮಾಡುವುದಿಲ್ಲ’ ಎಂದು ಹೇಳಿದರು.

‘ಈ ಜಾತಿಯವರು ಪ್ರವೇಶ ಮಾಡಿದ್ದಾರೆ ಎಂಬುದು ಗೊತ್ತಾದರೆ ನಮ್ಮ ಹಟ್ಟಿಯ ಜನರೆಲ್ಲ ಸೇರಿ ದೇವರನ್ನು ಗಂಗೆಸ್ಥಾನಕ್ಕೆ ಕೊಂಡೊಯ್ದು ಪುಣ್ಯಪೂಜೆ ನೆರವೇರಿಸುತ್ತೇವೆ. ಕಲ್ಲತ್ತಗಿರಿ ಜಲಪಾತದ ತನಕ ಸುಮಾರು 15 ಕಿ.ಮೀ ಕಾಲ್ನಡಿಗೆಯಲ್ಲೇ ದೇವರ ಪಲ್ಲಕ್ಕಿ (ಅಡ್ಡೆ) ಹೊತ್ತು ತೆರಳುತ್ತೇವೆ’ ಎಂದು ಅವರು ತಿಳಿಸಿದರು.

‘ಈಗ ನಿತ್ಯ ಪೊಲೀಸರು, ಹೋರಾಟಗಾರರು ಬಂದು ಹೋಗುತ್ತಿದ್ದಾರೆ. ಇದೆಲ್ಲ ಎಷ್ಟು ದಿನ ನಡೆಯುತ್ತದೆಯೋ ಗೊತ್ತಿಲ್ಲ, ತಿಂಗಳುಗಳೇ ಕಳೆಯಬಹುದು. ಆ ನಂತರವೇ ಗಂಗೆ ಪೂಜೆ ನೆರವೇರಿಸಿ ಪುಣ್ಯಪೂಜೆ ನಡೆಸಲಾಗುವುದು. ಅಲ್ಲಿಯ ತನಕ ದೇಗುಲದ ಬಾಗಿಲು ತೆರೆಯುವುದಿಲ್ಲ’ ಎಂದರು.

‘ಎಲ್ಲಾ ಗೊಲ್ಲರಹಟ್ಟಿಯಲ್ಲೂ ರಂಗನಾಥಸ್ವಾಮಿ ದೇಗುಲಗಳಿವೆ. ರಂಗನಾಥಸ್ವಾಮಿ ದೇಗುಲ ಇರುವ ಗೊಲ್ಲರ ಹಟ್ಟಿಗೆ ಈ  ಜಾತಿಯವರು ಪ್ರವೇಶ ಮಾಡುವುದಿಲ್ಲ. ಪ್ರವೇಶ ಮಾಡಲೇಬೇಕೆಂದು ಹಟ ಹಿಡಿದರೆ ಅವರನ್ನು ದೇವರೇ ನೋಡಿಕೊಳ್ಳುತ್ತಾನೆ. ನಾವು ಯಾರಿಗೂ ಬರಬೇಡಿ ಎನ್ನುವುದಿಲ್ಲ. ಜಾತಿ ಮರೆಮಾಚಿ ಬಂದಿರುವುದು ಗೊತ್ತಾದರೆ ನಾವೇ ಪುಣ್ಯಪೂಜೆ ಮಾಡಿಸುತ್ತೇವೆ’ ಎಂದು ತಿಳಿಸಿದರು.

****

ಪರಿಶಿಷ್ಟ ಜಾತಿಯವರನ್ನು ಕೀಳಾಗಿ ಕಾಣುವುದು ತಪ್ಪು, ಇದು ಪುನರಾವರ್ತನೆ ಆಗಬಾರದು ಎಂದು ಎಚ್ಚರಿಕೆಯನ್ನು ಗೊಲ್ಲರಹಟ್ಟಿ ಜನರಿಗೆ ನೀಡಲಾಗಿದೆ. ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು

-ಯೋಗೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.