ADVERTISEMENT

ಇಲ್ಲಿ ದಲಿತರಿಗೆ ಸಂಚಾರ, ದೇವಸ್ಥಾನ ಪ್ರವೇಶ ನಿಷಿದ್ಧ!

ಅನಿಷ್ಟ ಪದ್ಧತಿ ಕೈಬಿಡಲು ದಸಂಸ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 18:35 IST
Last Updated 25 ಆಗಸ್ಟ್ 2019, 18:35 IST
   

ಹೊನ್ನಾಳಿ: ‘ನ್ಯಾಮತಿ ತಾಲ್ಲೂಕಿನ (ಈ ಮುನ್ನ ಹೊನ್ನಾಳಿ ತಾಲ್ಲೂಕಿಗೆ ಒಳಪಟ್ಟಿತ್ತು) ಮಲ್ಲಿಗೇನಹಳ್ಳಿಯಲ್ಲಿ ಶ್ರಾವಣಮಾಸದಲ್ಲಿ ದಲಿತರು ರಸ್ತೆಯಲ್ಲಿ ಓಡಾಡುವಂತಿಲ್ಲ. ಚಪ್ಪಲಿ ಧರಿಸುವಂತಿಲ್ಲ. ಊರೊಳಗೆ, ದೇವಸ್ಥಾನಗಳಿಗೆ ಪ್ರವೇಶ ಮಾಡುವಂತಿಲ್ಲ ಎಂದು ಲಿಂಗಾಯತ ಸಮುದಾಯದ ಮುಖಂಡರು ಆದೇಶ ಮಾಡಿದ್ದು, ಗ್ರಾಮದ ದಲಿತರು ಇದರಿಂದ ತೀವ್ರ ತೊಂದರೆಗೊಳಗಾಗಿದ್ದಾರೆ’ ಎಂದು ಹೊನ್ನಾಳಿ ತಾಲ್ಲೂಕು ಘಟಕದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಮಾರಿಕೊಪ್ಪ ಮಂಜುನಾಥ್ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರಾವಣಮಾಸದ ಪ್ರತಿ ‌ಸೋಮವಾರ ಈ ಕಟ್ಟಪ್ಪಣೆ ಹೇರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಈ ಸಂದರ್ಭದಲ್ಲಿ ದಲಿತರ ಓಡಾಟ ನಿಷಿದ್ಧ. ದಲಿತರಿಗೆ ಅನಾರೋಗ್ಯ ಉಂಟಾದರೆ ಅವರು ಆಸ್ಪತ್ರೆಗಳಿಗೆ ತೆರಳುವುದು ಹೇಗೆ? ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಪದ್ಧತಿ’ ಎಂದು ದೂರಿದರು.

‘ಕಳೆದ ಸೋಮವಾರ ದಲಿತರು ಇದನ್ನು ವಿರೋಧಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಲಿಂಗಾಯತ ಸಮುದಾಯದ ಮುಖಂಡರು ಈ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಆದ್ದರಿಂದ ಈ ಬಗ್ಗೆ ನ್ಯಾಮತಿ ತಾಲ್ಲೂಕಿನ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಈ ಪದ್ಧತಿಯನ್ನು ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.