ಸುಪ್ರೀಂ ಕೋರ್ಟ್
ನವದೆಹಲಿ: ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ದತ್ತಪೀಠದ ಪೂಜೆಯ ಹಕ್ಕಿನ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಮಂಗಳವಾರ ನಿರ್ದೇಶನ ನೀಡಿತು.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು ತನ್ನ ನಿಲುವನ್ನು ಸ್ಪಷ್ಟಪಡಿಸಲು ಕರ್ನಾಟಕ ಸರ್ಕಾರಕ್ಕೆ ಎಂಟು ವಾರಗಳ ಕೊನೆಯ ಕಾಲಾವಕಾಶ ನೀಡಿತು. ಇಲ್ಲದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿತು.
ಈ ಸಂದರ್ಭದಲ್ಲಿ ವಕೀಲರು, ‘ದತ್ತಪೀಠದಲ್ಲಿ ಹಿಂದೂ ಅರ್ಚಕರು ಹಿಂದೂ ಪದ್ಧತಿ ಪಾಲಿಸುತ್ತಿದ್ದಾರೆ ಹಾಗೂ ಮುಸ್ಲಿಂ ಪದ್ಧತಿ ಅನುಸಾರ ಆಚರಣೆ ನೋಡಿಕೊಳ್ಳಲು ಮುಜಾವರ್ ಇದ್ದಾರೆ’ ಎಂದರು.
ಆಗ ನ್ಯಾಯಪೀಠ, ‘ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಠಿಣ. ಅದು ಸುಲಭ ಎಂದು ನಾವು ಹೇಳುತ್ತಿಲ್ಲ. ನಿರ್ಧಾರ ತೆಗೆದುಕೊಳ್ಳಲು ನಾವು ಹೆಚ್ಚುವರಿ ಸಮಯ ನೀಡುತ್ತಿದ್ದೇವೆ’ ಎಂದಿತು.
ಇದಕ್ಕೂ ಮೊದಲು ರಾಜ್ಯ ಸರ್ಕಾರವು, ‘ಈ ವಿವಾದದ ಇತ್ಯರ್ಥಕ್ಕಾಗಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಸಮಿತಿಯು ವಿವಾದದ ಪರಿಶೀಲನೆ ನಡೆಸುತ್ತಿದೆ’ ಎಂದು ಹೇಳಿತು.
2024ರ ಸೆಪ್ಟೆಂಬರ್ 3ರಂದು ನ್ಯಾಯಪೀಠವು, 2024ರ ಜನವರಿ 25ರಂದು ಸಚಿವ ಸಂಪುಟ ಉಪಸಮಿತಿ ರಚನೆಯಾಗಿದ್ದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ದತ್ತಪೀಠದ ಪೂಜೆ ನೆರವೇರಿಸಲು ಮುಜಾವರ್ ನೇಮಕ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ 2023ರ ಮಾರ್ಚ್ 6ರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.