ADVERTISEMENT

ಮಾಜಿ ಸೈನಿಕರ ಸಮಸ್ಯೆ ಆಲಿಸಿದ ಡಿ.ಸಿ

ಭೂಮಿಗೆ ಸಲ್ಲಿಕೆಯಾಗಿರುವ 379 ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 13:50 IST
Last Updated 25 ಸೆಪ್ಟೆಂಬರ್ 2020, 13:50 IST
ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಐ್‌ ಅವರು ಮಾತನಾಡಿದರು
ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಐ್‌ ಅವರು ಮಾತನಾಡಿದರು   

ಮಡಿಕೇರಿ: ಜಿಲ್ಲೆಯಲ್ಲಿ ಮಾಜಿ ಸೈನಿಕರಿಂದ ಭೂಮಿ ನೀಡಬೇಕೆಂದು ಸಲ್ಲಿಕೆಯಾಗಿರುವ ಸುಮಾರು 379 ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೋಬಳಿವಾರು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಸೈನಿಕರ ಮಂಡಳಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಜಿ ಸೈನಿಕರು ಭೂಮಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಸಂಬಂಧ ಉಪ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಜೊತೆ ಖುದ್ದು ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಜರಾಗಿ ವಿಲೇವಾರಿ ಮಾಡಬೇಕು. ಜೊತೆಗೆ ಈ ಸಂಬಂಧ ಪಟ್ಟಿ ಸಿದ್ಧಪಡಿಸಿ ಉಪ ವಿಭಾಗಾಧಿಕಾರಿ ಕಚೇರಿಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ADVERTISEMENT

ಯಾವ ದಿನಾಂಕದಂದು ಹೋಬಳಿಗೆ ತೆರಳಲಾಗುತ್ತದೆ ಎಂಬ ಬಗ್ಗೆ ಮುಂಚಿತವಾಗಿ ಆಯಾಯ ಹೋಬಳಿ ವ್ಯಾಪ್ತಿಯ ಮಾಜಿ ಸೈನಿಕರಿಗೆ ಮಾಹಿತಿ ನೀಡಬೇಕು. ಭೂಮಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಸಂಬಂಧ ಅಕ್ಟೋಬರ್ 15ರೊಳಗೆ ಪೂರ್ಣಗೊಳಿಸುವಂತೆ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.

ಭೂಮಿ ಇತರ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಕಂದಾಯಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ, ಮಾಜಿ ಸೈನಿಕರು ಕೃಷಿ ಸಾಲ ಪಡೆಯುವಂತಾಗಲು ವ್ಯವಸ್ಥೆ ಮಾಡಬೇಕಿದೆ ಎಂದು ಅವರು ಕೋರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಜತೆ ಚರ್ಚಿಸುವಂತೆ ಸಲಹೆ ಮಾಡಿದರು.

ಮಾಜಿ ಸೈನಿಕರು ಆಶ್ರಯ ಯೋಜನೆಯಡಿ ಶೇ 1ರಷ್ಟು ಮೀಸಲಾತಿಗೆ ಅನುಗುಣವಾಗಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಮಾಜಿ ಸೈನಿಕರ ಕೋಟಾದ ಆಯ್ಕೆಯಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಅಂತರ್ಜಾಲದಲ್ಲಿ ವ್ಯವಸ್ಥೆ ಮಾಡಬೇಕಿದೆ ಎಂದು ಗೀತಾ ಅವರು ಮನವಿ ಮಾಡಿದರು.

ಸಮಿತಿಯ ಉಪಾಧ್ಯಕ್ಷರಾದ ಓ.ಎಸ್.ಚಿಂಗಪ್ಪ ಅವರು, ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಕರ್ಣಂಗೇರಿ ವ್ಯಾಪ್ತಿಯಲ್ಲಿ 7 ಸೆಂಟ್ ಜಾಗ ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಸಂಬಂಧ ಜಾಗ ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಜಾಗ ಗುರ್ತಿಸಿಕೊಡಲು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಮಾಜಿ ಸೈನಿಕರ ಕುಂದುಕೊರತೆ ಸಂಬಂಧಿಸಿದಂತೆ ಆರು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಸೈನಿಕರಿಗಾಗಿ ನಿವೇಶನ ಒದಗಿಸಬೇಕು ಎಂದು ಒ.ಎಸ್.ಚಿಂಗಪ್ಪ ಅವರು ಕೋರಿದರು.

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಸಮಿತಿ ಸದಸ್ಯರಾದ ಸುಬೇದಾರ್ ಪುರುಷೋತ್ತಮ, ಹವಾಲ್ದಾರ್ ವಿಜಯ ಕುಮಾರ್, ತಹಶೀಲ್ದಾರರಾದ ಗೋವಿಂದ ರಾಜು, ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಭೂದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಪೊಲೀಸ್ ಇನ್‌ಸ್ಪೆಕ್ಟರ್‌ ಐ.ಪಿ.ಮೇದಪ್ಪ, ನಗರಸಭೆ ಪೌರಾಯುಕ್ತ ರಾಮದಾಸ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವ್ಯವಸ್ಥಾಪಕರಾದ ಶಾಂತಿ, ಶಿರಸ್ತೇದಾರ್‌ ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.