ADVERTISEMENT

ಡಿಸಿಸಿ ಬ್ಯಾಂಕ್‌ ವಿಲೀನ | ಕೇರಳಕ್ಕೆ ಅಧ್ಯಯನ ತಂಡ: ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 15:50 IST
Last Updated 18 ಮಾರ್ಚ್ 2022, 15:50 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಬೆಂಗಳೂರು: ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ಗಳನ್ನು ಅಪೆಕ್ಸ್‌ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಸಲಹೆ ಕುರಿತು ಅಧ್ಯಯನ ನಡೆಸಲು ಕೇರಳಕ್ಕೆ ಅಧಿಕಾರಿಗಳ ತಂಡವೊಂದನ್ನು ಕಳುಹಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಈಗ ರಾಜ್ಯದಲ್ಲಿ ಮೂರು ಹಂತದ ಸಹಕಾರಿ ವ್ಯವಸ್ಥೆ ಇದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು, ಡಿಸಿಸಿ ಬ್ಯಾಂಕ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳನ್ನು ಮಾತ್ರ ಉಳಿಸಿಕೊಂಡರೆ ಉತ್ತಮ ಎಂಬ ಸಲಹೆ ಕೇಂದ್ರ ಸಹಕಾರ ಸಚಿವಾಲಯದಿಂದ ಬಂದಿದೆ’ ಎಂದರು.

ಈಗ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಶೇಕಡ 1ರಷ್ಟು ಮೊತ್ತವನ್ನು ಡಿಸಿಸಿ ಬ್ಯಾಂಕ್‌ಗಳಿಗೆ ನಿರ್ವಹಣಾ ವೆಚ್ಚವಾಗಿ ಪಾವತಿಸಬೇಕಿದೆ. ಎರಡು ಹಂತದ ವ್ಯವಸ್ಥೆಯಾದರೆ ಆ ಹಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಳಿಯೇ ಉಳಿಯುತ್ತದೆ. ಆಡಳಿತಾತ್ಮಕ ವೆಚ್ಚ ಕಡಿಮೆಯಾಗುತ್ತದೆ. ಕಡತಗಳ ಚಲನೆಯ ಹಂತಗಳು ಕಡಿಮೆಯಾಗಿ, ಪಾರದರ್ಶಕತೆಯನ್ನೂ ತರಬಹುದು ಎಂಬ ಸಲಹೆ ಕೇಂದ್ರದಿಂದ ಬಂದಿದೆ ಎಂದು ಹೇಳಿದರು.

ADVERTISEMENT

‘ಜಾರ್ಖಂಡ್‌ ಮತ್ತು ಕೇರಳ ರಾಜ್ಯಗಳು ಈಗಾಗಲೇ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿವೆ. ಅಲ್ಲಿ ಯಾವ ಬದಲಾವಣೆ ಆಗಿದೆ? ಇದರ ಅನುಕೂಲ ಮತ್ತು ಅನಾನುಕೂಲಗಳು ಏನು ಎಂಬುದರ ಕುರಿತು ಅಧ್ಯಯನ ನಡೆಸಲಾಗುವುದು. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಹಿರಿಯ ಅಧಿಕಾರಿಗಳ ತಂಡವೊಂದನ್ನು ಕೇರಳಕ್ಕೆ ಕಳುಹಿಸಲಾಗುವುದು’ ಎಂದು ಸೋಮಶೇಖರ್‌ ತಿಳಿಸಿದರು.

ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್‌ಗಳಲ್ಲಿ ಹೆಚ್ಚಿನವು ಆರ್ಥಿಕವಾಗಿ ಸಶಕ್ತವಾಗಿವೆ. ವಿಲೀನಗೊಳಿಸಲೇಬೇಕೆಂಬ ಕಡ್ಡಾಯವೇನೂ ಇಲ್ಲ. ಈಗ ಅಧ್ಯಯನ ಮಾತ್ರ ನಡೆಯಲಿದೆ. ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಪರಾಮರ್ಶಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.