ADVERTISEMENT

ತ್ಯಾಜ್ಯ ನಿರ್ವಹಣೆ: ₹1.10 ಲಕ್ಷ ಕೋಟಿ ವ್ಯಾಪಾರದತ್ತ ಹೆಜ್ಜೆ –ಅಶ್ವತ್ಥನಾರಾಯಣ

ನಾವೀನ್ಯತಾ ಪರಿಹಾರಗಳಿಗೆ ಸವಾಲು’ ಉಪಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 20:01 IST
Last Updated 15 ಡಿಸೆಂಬರ್ 2020, 20:01 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ‘ದೇಶದಲ್ಲಿ ತ್ಯಾಜ್ಯ ನಿರ್ವಹಣಾ ಉದ್ಯಮವು 2025ರ ವೇಳೆಗೆ ಸುಮಾರು ₹ 1.10 ಲಕ್ಷ ಕೋಟಿ ಮೊತ್ತದ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ’ ಎಂದು ಐಟಿಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸೋಷಿಯಲ್ ಆಲ್ಫಾ ಮತ್ತು ಎಚ್ ಆ್ಯಂಡ್‌ ಎಂ ಫೌಂಡೇಷನ್ ವತಿಯಿಂದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ತ್ಯಾಜ್ಯ ನಿರ್ವಹಣೆಯಲ್ಲಿ ನಾವೀನ್ಯತಾ ಪರಿಹಾರಗಳಿಗೆ ಸವಾಲು’ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕಸವನ್ನು ಇಂಧನವನ್ನಾಗಿ ಪರಿವರ್ತಿಸುವ ತಾಂತ್ರಿಕತೆಗಳು, ಇಂಟರ್‌ನೆಟ್ ಬೆಂಬಲಿತ ಸೇವೆಗಳು, ರೋಬೋಟಿಕ್ಸ್ ಆನ್ವಯಿಕತೆಗಳು, ಜೈವಿಕ ತಂತ್ರಜ್ಞಾನ ಮಧ್ಯಸ್ಥಿಕೆ ನೆರವು ಯೋಜನೆಗಳು, ಸೋಲಾರ್ ಫಲಕಗಳಿರುವ ಕಾಂಪೋಸ್ಟ್ ತಯಾರಿಕಾ ಘಟಕಗಳು, ದತ್ತಾಂಶ ವಿಶ್ಲೇಷಕಗಳು ತ್ಯಾಜ್ಯ ನಿರ್ವಹಣೆಯನ್ನು ಆರ್ಥಿಕ ಕಾರ್ಯಸಾಧುವಾದ ಸುಸ್ಥಿರ ಮಾದರಿಗಳನ್ನಾಗಿ ಮಾಡಬಲ್ಲವು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ತ್ಯಾಜ್ಯ ನಿರ್ವಹಣೆಯಲ್ಲಿ ಸ್ವೀಡನ್ ನಮಗೆ ಮಾದರಿಯಾಗಬೇಕು. 2016ರ ಸಂದರ್ಭದಲ್ಲಿ ಅಲ್ಲಿ ಕೂಡ ತ್ಯಾಜ್ಯ ವಿಲೇವಾರಿ ಸಮಸ್ಯೆ ಇತ್ತು. ಆದರೆ, ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ತಾಂತ್ರಿಕತೆ ಅಳವಡಿಸಿ ಕೊಂಡ ಆ ದೇಶ ಈಗ ಕಸ ನಿರ್ವಹಣೆ ಯಿಂದ ಲಾಭ ಗಳಿಸುತ್ತಿದೆ’ ಎಂದರು.

‘ಈ ಉಪಕ್ರಮದ ಮೂಲಕ ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯುವ ಐದು ನವೋದ್ಯಮಗಳನ್ನು ವಿಜೇತರೆಂದು ಆಯ್ಕೆ ಮಾಡಲಾಗುವುದು. ಆಯ್ಕೆ ಯಾದ ನವೋದ್ಯಮಗಳಿಗೆ ತಮ್ಮ ತ್ಯಾಜ್ಯ ನಿರ್ವಹಣಾ ತಾಂತ್ರಿಕತೆಯನ್ನು ಪ್ರಾಯೋ ಗಿಕವಾಗಿ ಕಾರ್ಯರೂಪಕ್ಕೆ ತರಲು ಸೋಷಿಯಲ್ ಆಲ್ಫಾ ಮತ್ತು ಎಚ್ & ಎಂ ಫೌಂಡೇಷನ್ ನೆರವು ನೀಡಲಿವೆ’ ಎಂದರು.

ಸೋಷಿಯಲ್ ಆಲ್ಫಾ ಕಾರ್ಯಕ್ರಮ ನಿರ್ದೇಶಕಿ ಮಧುಶ್ರೀ ನಾರಾಯಣ್, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್, ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆಯ (ಕಿಟ್ಸ್) ನಿರ್ದೇಶಕಿ ಮೀನಾ ನಾಗರಾಜ್, ಬಿಬಿ ಎಂಪಿ ಹೆಚ್ಚುವರಿ ಆಯುಕ್ತ (ಘನ ತ್ಯಾಜ್ಯ ವಿಲೇವಾರಿ) ರಣದೀಪ್ ಡಿ. ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಕರ್ನಾಟಕ ನವೋದ್ಯಮಗಳ ದೂರ ದರ್ಶಿತ್ವ ತಂಡದ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.