ADVERTISEMENT

ಸರ್ಕಾರಿ ಶಾಲೆ ದುರಸ್ತಿಗೆ ಗಡುವು

ಕಡೆಗಣಿಸಿದರೆ ದುರಾಡಳಿತ ಎಂದು ಪರಿಗಣನೆ: ಲೋಕಾಯುಕ್ತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:15 IST
Last Updated 9 ಡಿಸೆಂಬರ್ 2019, 20:15 IST
   

ಬೆಂಗಳೂರು: ರಾಜ್ಯದ 11 ಜಿಲ್ಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳನ್ನು ಆರು ತಿಂಗಳ ಒಳಗಾಗಿ ದುರಸ್ತಿ ಮಾಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಖಡಕ್‌ ಆದೇಶ ನೀಡಿದ್ದಾರೆ.

ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವ ಕುರಿತು ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಲೋಕಾಯುಕ್ತರು, 9 ಪುಟಗಳ ಆದೇಶ ನೀಡಿದ್ದಾರೆ. ಈ ಆದೇಶಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖ ಮಾಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಮಿಷನರ್‌ ಹಾಗೂ ಜಿಲ್ಲೆಗಳ ಉಪ ನಿರ್ದೇಶಕರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ. ರಾಜ್ಯದ ಸರ್ಕಾರಿ ಶಾಲಾ ಕಟ್ಟಡಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಲೋಕಾಯುಕ್ತರು ಈ ಹಿಂದೆಯೇ ಸೂಚನೆ ನೀಡಿದ್ದರು.

ADVERTISEMENT

ಅದರಂತೆ 11 ಜಿಲ್ಲೆಗಳಲ್ಲಿನ ಶಾಲಾ ಕಟ್ಟಡಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸಲಾಗಿದೆ. ಮಿಕ್ಕ ಜಿಲ್ಲೆಗಳಲ್ಲಿನ ವರದಿ ಸಲ್ಲಿಸಲು ಕೊಂಚ ಸಮಯಾವಕಾಶ ನೀಡುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ. ತಮ್ಮ ಆದೇಶ ಕೈಸೇರಿದ ಆರು ತಿಂಗಳೊಳಗಾಗಿ ಕೆಟ್ಟ ಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಲೋಕಾಯುಕ್ತರ ಕೈಸೇರಿರುವ ವರದಿಗಳಲ್ಲಿ ಬಹಳಷ್ಟು ಶಾಲೆಗಳು ಬೀಳುವ ಸ್ಥಿತಿಯಲ್ಲಿವೆ; ಅನೇಕ ಕಡೆಗಳಲ್ಲಿ ಶೌಚಾಲಯಗಳಿಲ್ಲ; ಕುಡಿಯುವ ನೀರಿಲ್ಲ; ಕೆಲವು ಶಾಲೆಗಳಿಗೆ ಕಾಂಪೌಂಡ್‌ ಇಲ್ಲದೆ ಹಂದಿ, ನಾಯಿ ಮತ್ತು ಬಿಡಾಡಿ ದನಗಳ ಬೀಡಾಗಿವೆ ಎಂದು ತಿಳಿಸಲಾಗಿದೆ. ಈ ಸಂಬಂಧ ತಾವು ನೀಡಿರುವ ಆದೇಶದ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮೂರು ತಿಂಗಳೊಳಗೆ ಮಧ್ಯಂತರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ಮೊದಲು ಇದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು. ಶಾಲಾ ಕಟ್ಟಡಗಳು ತ್ವರಿತಗತಿಯಲ್ಲಿ ರಿಪೇರಿ ಆಗದಿದ್ದರೆ ಮಕ್ಕಳ ಪ್ರಾಣಕ್ಕೆ ಅಪಾಯ ಬಂದೊದಗಬಹುದು. ಸರ್ಕಾರ ತುರ್ತು ಕ್ರಮ ವಹಿಸಬೇಕು ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಇಲಾಖೆ ತಮ್ಮ ಆದೇಶವನ್ನು ಕಡೆಗಣಿಸಿದರೆ, ದುರಾಡಳಿತ ಎಂದು ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 5ಕ್ಕೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.