ADVERTISEMENT

‘ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವಿನ ಪ್ರಮಾಣ ಹೆಚ್ಚಳ’

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಳವಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:49 IST
Last Updated 11 ಆಗಸ್ಟ್ 2021, 19:49 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ‘ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ. ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆ ನೀಡುವ ಕೆಲಸ ಆಗಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜತೆಗೆ ಬುಧವಾರ ಸಭೆ ನಡೆಸಿದ ಅವರು, ಪ್ರಸಕ್ತ ವರ್ಷದ ಕಾರ್ಯಕ್ರಮಗಳು ಮತ್ತು ಅನುದಾನದ ಪ್ರಸ್ತಾವನೆಗಳ ಬಗ್ಗೆ ಪರೀಶೀಲನೆ ನಡೆಸಿದರು.

‘ಸಾಂಕ್ರಾಮಿಕವಲ್ಲದ ರೋಗಗಳ ಸಾವನ್ನು ತಡೆಯಲು ವಿವಿಧ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬರುವವರಿಗೆ ರಕ್ತ ಹಾಗೂ ಇತರೆ ಪರೀಕ್ಷೆಗಳನ್ನು ನಡೆಸಿ, ರೋಗಗಳನ್ನು ಪತ್ತೆ ಮಾಡಬೇಕು. ಅದನ್ನು ದಾಖಲಿಸುವ ಕೆಲಸ ಕೂಡ ಆಗಬೇಕು. ಅದಕ್ಕಾಗಿ ಕೆಲ ಆರೋಗ್ಯ ಕಾರ್ಯಕ್ರಮಗಳ ಮರು ವಿನ್ಯಾಸ ಮಾಡಿಕೊಳ್ಳುವ ಅಗತ್ಯವಿದೆ. ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಇದಕ್ಕಾಗಿ ಇಲಾಖೆಯ ಮಾಹಿತಿ ವಿಭಾಗವು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು’ ಎಂದರು.

ADVERTISEMENT

‘ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್ಎಂ) ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ನೀಲನಕ್ಷೆ ರೂಪಿಸಬೇಕು. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ಅದಕ್ಕಾಗಿ ಪ್ರತಿಯೊಂದು ಕಾರ್ಯ
ಕ್ರಮಗಳನ್ನೂ ಜನಸ್ನೇಹಿಯಾಗಿ ಮರು ವಿನ್ಯಾಸಗೊಳಿಸುವ ಅಗತ್ಯವಿದೆ’ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

‘ಜೀವಸಾರ್ಥಕತೆ ವಿಭಾಗವೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಅಂಗಾಂಗ ದಾನ ಮತ್ತು ಚಿಕಿತ್ಸೆಯು ಎಲ್ಲ ಬಡವರಿಗೂ ಕೈಗೆಟಕುವ ರೀತಿಯಲ್ಲಿ ಜಾರಿಗೊಳ್ಳಬೇಕಿದೆ. ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಕಾರ್ಯಕ್ರಮ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ’ ಎಂದರು.

ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ಡಾ. ಕೆ.ವಿ. ತ್ರಿಲೋಕ್‌ ಚಂದ್ರ, ಎನ್‌ಎಚ್‌ಎಂ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್‌ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.