ADVERTISEMENT

‘ಋಣಮುಕ್ತ’ ಕಾಯ್ದೆ ಜಾರಿ: ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 5:16 IST
Last Updated 25 ಜುಲೈ 2019, 5:16 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ    

ಬೆಂಗಳೂರು: ಭೂ ಸುಧಾರಣೆ ಕಾಯಿದೆ ಮಾದರಿಯಲ್ಲೇ ಲೇವಾದೇವಿದಾರರಿಂದ ಗ್ರಾಮೀಣ ಭಾಗದ ಬಡ ಜನರ ರಕ್ಷಣೆಗೆ ‘ಋಣಮುಕ್ತ’ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

‘ಋಣಮುಕ್ತ’ ಮಸೂದೆಯನ್ನು ಸಿದ್ಧಪಡಿಸಿ ರಾಷ್ಟ್ರಪತಿಗೆ ಕಳುಹಿಸಿದ್ದು, ಜುಲೈ 16ರಂದು ಅವರು ಸಹಿ ಮಾಡಿದ್ದಾರೆ. ರಾಜ್ಯದಲ್ಲಿ ಜುಲೈ 23ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದು, ಮುಂದಿನ ಒಂದು ವರ್ಷ ಚಾಲ್ತಿಯಲ್ಲಿ ಇರುತ್ತದೆ. ಬಡ್ಡಿಗೆ ಸಾಲಪಡೆದು ನೊಂದ ಬಡವರು 90 ದಿನಗಳ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ತಿಳಿಸಿದರು.

‘ರೈತರ ಸಾಲ ಮನ್ನಾ ನಿರ್ಧಾರದ ಸಮಯದಲ್ಲೇಗ್ರಾಮೀಣ ಭಾಗದ ಬಡ ಜನರ ಸಾಲ ಮನ್ನಾಗೂ ಉದ್ದೇಶಿಸಲಾಗಿತ್ತು. ಅದಕ್ಕಾಗಿ ಕಾನೂನು ರೂಪಿಸಲಾಗಿದ್ದು, ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದಿದ್ದರೆ, ಅಂತಹವರಿಗೆ ಅಸಲು ಪಾವತಿಸದೆ ಋಣಮುಕ್ತರಾಗಬಹುದು. ನನ್ನ ಅಧಿಕಾರ ಅವಧಿಯಲ್ಲಿ ರೈತರ ಸಾಲ ಮನ್ನಾ ಜತೆಗೆ ಋಣಮುಕ್ತ ಕಾಯಿದೆ ಜಾರಿಗೆ ತಂದಿರುವುದು ದೊಡ್ಡ ಸಾಧನೆ. ಅದರಲ್ಲೂ ಅಧಿಕಾರದ ಕೊನೆಯ ದಿನ ಜಾರಿಯಾಗಿರುವುದು ಹೆಮ್ಮೆ ತಂದಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಏನು ಮಾಡಬೇಕು?

ಪಾನ್ ಬ್ರೋಕರ್, ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದವರು ಅಗತ್ಯ ದಾಖಲೆಗಳೊಂದಿಗೆ ಉಪವಿಭಾಗಾಧಿಕಾರಿ ಕಚೇರಿಗೆ ಹೋಗಿ ಹೆಸರು ನೋಂದಾಯಿಸಬೇಕು.

ಸಾಲ ಪಡೆದವರ ಬಳಿ ಆಸ್ತಿ ಪತ್ರಗಳಿದ್ದರೆ, ಚಿನ್ನದ ಒಡವೆಗಳನ್ನು ಒತ್ತೆ ಇಟ್ಟಿದ್ದರೆ, ಬ್ಯಾಂಕ್‌ಗಳ ಚೆಕ್ ನೀಡಿದ್ದರೆ, ಸಾಲ ಪಡೆದಿದ್ದಕ್ಕೆ ವಿವರ ಬರೆದು ಸಹಿಮಾಡಿ ಕೊಟ್ಟಿದ್ದರೆ, ಸಾಲದ ರಸೀದಿ ಹಾಗೂ ಸಾಲ ಪಡೆದಿರುವುದಕ್ಕೆ ಇತರೆ ಯಾವುದೇ ಅಗತ್ಯ ದಾಖಲೆಗಳು ಇದ್ದರೆ ಸಲ್ಲಿಸಬಹುದು.

ಕಾಯಿದೆ: ಏನು-ಎತ್ತ?

ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದಿದ್ದರೆ ಅಂತಹವರಿಗೆ ಹೊಸ ನಿಯಮದಂತೆ ಬಡ ಜನರು ಸಾಲದ ಬಾಕಿ ಹಣವನ್ನು ಮರುಪಾವತಿ ಮಾಡಬೇಕಿಲ್ಲ. ಬಡ್ಡಿಗೆ ಸಾಲ ನೀಡಿದವರಿಗೆ ಅಸಲು ವಾಪಸ್ ಬರುವುದಿಲ್ಲ.ಸರ್ಕಾರ ಯಾವುದೇ ಹಣಕಾಸಿನ ನೆರವು ನೀಡುವುದಿಲ್ಲ. ಬಡ್ಡಿಗೆ ಸಾಲ ಕೊಟ್ಟವರು ಹಣ ಕಳೆದುಕೊಳ್ಳುತ್ತಾರೆ.

ಯಾರಿಗೆಲ್ಲ ಅನುಕೂಲ

* ಸಣ್ಣ ರೈತರು

* ಭೂರಹಿತ ಕೃಷಿ ಕಾರ್ಮಿಕರು

* ಕಡುಬಡತನಲ್ಲಿ ಬದುಕುತ್ತಿರುವವರು

* ವಾರ್ಷಿಕ ₹ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು

* 2 ಹೆಕ್ಟೇರ್ ಪಾಳು ಭೂಮಿ ಹೊಂದಿದವರು

* 25 ಗುಂಟೆ ಮಳೆ ಆಶ್ರಿತ ನೀರಾವರಿ ಸೌಲಭ್ಯ ಹೊಂದಿದವರು

* 50 ಗುಂಟೆಯಲ್ಲಿ ಒಮ್ಮೆ ನೀರಾವರಿ ಬೆಳೆ ಬೆಳೆಯುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.