ADVERTISEMENT

ಮೃತ ಸಿದ್ದಿಕಿ ಪುತ್ರಿ ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

‘ಕೋವಿಡ್‌–19’ಕ್ಕೆ ದೇಶದಲ್ಲೇ ಮೊದಲ ಬಲಿಯಾಗಿದ್ದ ವೃದ್ಧ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 9:52 IST
Last Updated 31 ಮಾರ್ಚ್ 2020, 9:52 IST

ಕಲಬುರ್ಗಿ: ‘ಕೋವಿಡ್‌–19’ಕ್ಕೆ ದೇಶದಲ್ಲೇ ಮೊದಲ ಬಲಿಯಾಗಿದ್ದ ಇಲ್ಲಿಯ ವೃದ್ಧ ಮೊಹ್ಮದ್‌ ಹುಸೇನ್‌ ಸಿದ್ದಿಕಿ (76) ಅವರ ಪುತ್ರಿ ಈ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಸೌದಿ ಅರೇಬಿಯಾದಿಂದ ಮರಳಿದ್ದ ನಗರದ ಮೊಹ್ಮದ್‌ ಹುಸೇನ್‌ ಸಿದ್ದಿಕಿ ಅವರು ಮಾರ್ಚ್ 10ರಂದು ಮೃತಪಟ್ಟಿದ್ದರು. ಇವರನ್ನು ಆರೈಕೆ ಮಾಡಿದ್ದ 49 ವರ್ಷದ ಅವರ ಪುತ್ರಿಗೂ ಕೋವಿಡ್‌ ತಗುಲಿರುವುದು ಮಾರ್ಚ್‌ 12ರಂದು ದೃಢಪಟ್ಟಿತ್ತು.

ಅಂದಿನಿಂದಲೂ ಅವರನ್ನು ಇಲ್ಲಿನ ಇಎಸ್‌ಐಸಿ ಆಸ್ಪತ್ರೆಯಲ್ಲಿ ತೆರೆದ ವಿಶೇಷ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 19 ದಿನಗಳ ಚಿಕಿತ್ಸೆಯ ನಂತರ ಅವರು ಗುಣಮುಖರಾಗಿದ್ದು, ಮನೆಗೆ ಮರಳಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಖಚಿತಪಡಿದ್ದಾರೆ.

ADVERTISEMENT

ಸಿದ್ದಿಕಿ ಅವರ ಮನೆಗೆ ತೆರಳಿ ಆರಂಭದಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದ 63 ವರ್ಷದ ವೈದ್ಯರಿಗೂ ಸೋಂಕು ತಗುಲಿದ್ದು, ಅವರಿನ್ನೂ ಐಸೋಲೆಷನ್‌ ವಾರ್ಡ್‌ನಲ್ಲೇ ಇದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಅವರ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಆಧರಿಸಿ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಮೃತ ಸಿದ್ದಿಕಿ ಅವರ ನೇರ ಸಂಪರ್ಕಕ್ಕೆ ಬಂದ ಉಳಿದ 97 ಮಂದಿ ಹೋಂ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.