ADVERTISEMENT

ರಾತ್ರಿ 10ರವರೆಗಷ್ಟೇ ಪಟಾಕಿ ಧಮಾಕಾ

ಮುಖ್ಯ ಕಾರ್ಯದರ್ಶಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ * ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸುವಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 19:40 IST
Last Updated 2 ನವೆಂಬರ್ 2018, 19:40 IST
   

ಬೆಂಗಳೂರು: ದೀಪಾವಳಿ ಹಬ್ಬದ ದಿನಗಳಂದು (ನ. 5ರಿಂದ 8) ನಿತ್ಯ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹೊಡೆಯುವ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಪಟಾಕಿಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ’ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ದೀಪಾವಳಿ ಹಬ್ಬದಂದು ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಇತ್ತೀಚೆಗಷ್ಟೇ ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.

ಶುಕ್ರವಾರ ಅಧಿಕಾರಿಗಳ ಸಭೆ ಕರೆದಿದ್ದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌, ಸುಪ್ರೀಂಕೋರ್ಟ್ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಹಬ್ಬದ ದಿನಗಳಲ್ಲಿ ನಿತ್ಯ ಎರಡು ಗಂಟೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಸಭೆ ನಂತರ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ‘ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಎಲ್ಲ ಕ್ರಮ ಕೈಗೊಂಡಿದ್ದೇವೆ. ಸೂಚನೆಗಳ ಬಗ್ಗೆ ಸುತ್ತೋಲೆ ಹೊರಡಿಸುವುದಾಗಿ ಮುಖ್ಯ ಕಾರ್ಯದರ್ಶಿಯವರು ತಿಳಿಸಿದ್ದಾರೆ’ ಎಂದು ಹೇಳಿದರು.

‘ಹಬ್ಬದ ಸಂದರ್ಭದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಆಯಾ ವಿಭಾಗದ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಿದ್ದೇವೆ’ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌, ‘ಪಟಾಕಿ ಹೊಡೆಯುವುದರಿಂದ ಶಬ್ದ ಹಾಗೂ ವಾಯುಮಾಲಿನ್ಯ ಹೆಚ್ಚುತ್ತದೆ. ಕಡಿಮೆ ಶಬ್ದ ಹಾಗೂ ಹೊಗೆ ಬರುವ ಹಸಿರು ಪಟಾಕಿಗಳನ್ನು ಹೆಚ್ಚು ಬಳಸಬೇಕು. ಪೊಲೀಸ್‌ ಕಮಿಷನರ್‌ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

14 ದಿನ ಮಾಲಿನ್ಯ ‘ಪರೀಕ್ಷೆ’: ಸಾಮಾನ್ಯವಾಗಿ ವಾರಕ್ಕೆ ಎರಡು ದಿನಮಾತ್ರ ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಲಾಗುತ್ತದೆ. ಆದರೆ ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ವಿಶೇಷವಾಗಿ ಅಕ್ಟೋಬರ್‌ 31ರಿಂದ ನವೆಂಬರ್‌ 14ರವರೆಗೂ ನಿರಂತರವಾಗಿ ಮಾಲಿನ್ಯ ಪ್ರಮಾಣವನ್ನು ಅಳತೆ ಮಾಡಿ ನವೆಂಬರ್ ಅಂತ್ಯಕ್ಕೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗುತ್ತಿದೆ.

ನಿಯಂತ್ರಣ ಕಷ್ಟ: ‘ಪಟಾಕಿ ಹೊಡೆಯುವುದಕ್ಕೆ ನಿರ್ಬಂಧ ವಿಧಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಜನರು ಜಾಗೃತರಾಗುವವರೆಗೆ ಈ ಸಮಸ್ಯೆ ಬಗೆಹರಿಯುವುದಿಲ್ಲ. ಪೊಲೀಸರು ಲಾಠಿ ಹಿಡಿದು ಎಲ್ಲಾ ಬಡವಾಣೆಗಳಲ್ಲೂ ನಿಲ್ಲಲು ಸಾಧ್ಯವಿಲ್ಲ’ ಎಂದು ಪರಿಸರತಜ್ಞ ಚಂದ್ರಶೇಖರ್‌ ಹೇಳಿದರು.

ನಿರ್ಬಂಧಕ್ಕೆ ಸಾರ್ವಜನಿಕರ ಆಕ್ರೋಶ

ದೀಪಾವಳಿ ಹಬ್ಬಕ್ಕೆ ನಿರ್ಬಂಧ ವಿಧಿಸುತ್ತಿರುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

‘ಮನೆಮಂದಿಯೆಲ್ಲ ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ಒಟ್ಟಿಗೆ ಸೇರಿ ಪಟಾಕಿ ಹೊಡೆಯುವುದು ಪದ್ಧತಿ. ಅದಕ್ಕೇ ಸರ್ಕಾರ ನಿರ್ಬಂಧ ಹೇರಿದರೆ ಹೇಗೆ’ ಎಂದು ವಿಜಯಗರದ ನಿವಾಸಿ ಟಿ. ಬಾಲಚಂದ್ರ ಪ್ರಶ್ನಿಸಿದರು.

ಬನಶಂಕರಿಯ ರವಿ, ‘ನಾವು ಪಟಾಕಿ ಹೊಡೆಯೋಕೆ ಆರಂಭ ಮಾಡೋದೆ ರಾತ್ರಿ ಒಂಬತ್ತರ ನಂತರ. ಮಾಲಿನ್ಯದ ನೆಪದಲ್ಲಿ ನಮ್ಮ ಸಂಭ್ರಮವನ್ನು ಕಿತ್ತುಕೊಳ್ಳುತ್ತಿರುವುದು ಯಾವ ನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏನೇನು ನಿರ್ಬಂಧ?

* ಸಣ್ಣ ಹಾಗೂ ದೊಡ್ಡ ಸರ ಪಟಾಕಿ ಹೊಡೆಯುವುದು ನಿಷೇಧ

* ವೈಯಕ್ತಿಕವಾಗಿ ಪಟಾಕಿ ಹೊಡೆಯದೇ, ಗುರುತಿಸಿದ ಸ್ಥಳಗಳಲ್ಲಿ ಗುಂಪು ಗುಂಪಾಗಿ ಪಟಾಕಿ ಹೊಡೆಯಬೇಕು

* ಹೆಚ್ಚು ಶಬ್ದ ಹಾಗೂ ಹೊಗೆ ಬಾರದ ಪಟಾಕಿಗಳನ್ನು ಮಾತ್ರ ಹೊಡೆಯಬೇಕು

* ಸೂಚನೆ ಪಾಲಿಸದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ

-------

ಇಂದಿನಿಂದ ‘ಪಟಾಕಿ ಬಿಟ್ಟಾಕಿ’ ಜಾಗೃತಿ ಅಭಿಯಾನ

ಬಿ.ಪ್ಯಾಕ್‌ನ ಬಿ.ಕ್ಲಿಪ್ ಅಲುಮ್ನಿ ಅಸೋಸಿಯೇಷನ್, ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಸಲುವಾಗಿ ಶುಕ್ರವಾರದಿಂದ ಮೂರು ದಿನಗಳವರೆಗೆ ‘ಪಟಾಕಿ ಬಿಟ್ಟಾಕಿ’ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.

ನಗರದಲ್ಲಿಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಸಂಘಟಕ ನಿಸರ್ಗ ಜಗದೀಶ್, ‘ಬಿಬಿಎಂಪಿ ವ್ಯಾಪ್ತಿಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ, ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವುದಕ್ಕಾಗಿ ಜಾಗೃತಿ ಜಾಥಾ, ಪ್ರತಿಜ್ಞಾ ವಿಧಿಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಇಪ್ಪತ್ತಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಎರಡು ತಂಡಗಳ ಮೂಲಕ ‘ಬೇಡ ಪಟಾಕಿಗಳ ಹಾವಳಿ, ಆಚರಿಸೋಣ ಪರಿಸರ ದೀಪಾವಳಿ’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಲಿದ್ದೇವೆ. ಅಲ್ಲದೆ, ದೀಪ ಹಚ್ಚುವ ಮೂಲಕ ಪಟಾಕಿಯ ಸದ್ದು ಅಡಗಿಸೋಣ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.