ADVERTISEMENT

ಕಾಂಗ್ರೆಸ್‌ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ:ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 20:11 IST
Last Updated 17 ಆಗಸ್ಟ್ 2021, 20:11 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಪಘಾತ ಮಾಡಿರುವುದಾಗಿ ಅಪಪ್ರಚಾರ ನಡೆಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ರಾಮಲಿಂಗಾರೆಡ್ಡಿ, ಆರ್‌. ಧ್ರುವ ನಾರಾಯಣ್ ಮತ್ತು ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

‘ಸುಳ್ಳು ಕಥೆಗಳನ್ನು ಕಟ್ಟುವುದರಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್‌ ನಾಯಕರು ಪ್ರಚಾರಕ್ಕಾಗಿ ನನ್ನ ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ವಕೀಲರ ಜತೆ ಚರ್ಚಿಸಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ನಾನು ₹1,000 ಕೋಟಿ ಆಸ್ತಿ ಮಾಡಿದ್ದೇನೆ ಎಂದು ಕಾಂಗ್ರೆಸ್‌ ವಕ್ತಾರ ಬೃಜೇಶ್‌ ಕಾಳಪ್ಪ ಆರೋಪ ಮಾಡಿದ್ದಾರೆ. ಬೇನಾಮಿ ಆಸ್ತಿ ಇದ್ದರೆ ದಾಖಲೆಗಳನ್ನು ಮುಂದಿಟ್ಟು ಬಹಿರಂಗ ಚರ್ಚೆಗೆ ಬರಲಿ. ಅವರು ಹೇಳಿದ್ದು ನಿಜವಾಗಿದ್ದರೆ ಅವರಿಗೆ ಬೇನಾಮಿ ಆಸ್ತಿ ದಾನವಾಗಿ ನೀಡುತ್ತೇನೆ. ಈ ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ಬೃಜೇಶ್‌ ಅವರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಬೇನಾಮಿ ಆಸ್ತಿ ಮಾಡುವುದು ಕಾಂಗ್ರೆಸ್‌ ನಾಯಕರ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಅಕ್ರಮ ಆಸ್ತಿ ಸಂಪಾದಿಸಿ ಜೈಲು ಸೇರಿರುವ ಮತ್ತು ಜಾಮೀನಿನ ಮೇಲೆ ಇರುವ ಕಾಂಗ್ರೆಸ್‌ ನಾಯಕರ ಬಗ್ಗೆ ಬೃಜೇಶ್‌ ಕಾಳಪ್ಪ ಅವರಿಗೆ ಗೊತ್ತಿಲ್ಲವೇ? ತಾನು ಕಳ್ಳ ಪರರ ನಂಬ ಎನ್ನುವ ಕಾಂಗ್ರೆಸಿಗರ ಮನಸ್ಥಿತಿಯಲ್ಲಿ ತಮ್ಮಂತೆಯೇ ಎಲ್ಲರೂ ಕಳ್ಳರು ಎನ್ನುವ ಭಾವನೆಯಲ್ಲಿದ್ದಾರೆ’ ಎಂದು ರವಿ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.