ADVERTISEMENT

ಐಟಿ ಪಾರ್ಕ್‌ಗೆ ರಕ್ಷಣಾ ಇಲಾಖೆ ಜಮೀನು ಕೊಡಿ

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಗೆ ಅಶ್ವತ್ಥನಾರಾಯಣ ಮನವಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 16:50 IST
Last Updated 15 ಜನವರಿ 2021, 16:50 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಶುಕ್ರವಾರ ಯಲಹಂಕ ವಾಯು ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಮಾಡಿದರು
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಶುಕ್ರವಾರ ಯಲಹಂಕ ವಾಯು ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಮಾಡಿದರು   

ಬೆಂಗಳೂರು: ಬೆಳಗಾವಿಯಲ್ಲಿ ರಕ್ಷಣಾ ಇಲಾಖೆಯ ಬಳಿ ಇರುವ 10,639 ಎಕರೆಯ ಪೈಕಿ 750 ಎಕರೆ ಜಮೀನನ್ನು ಮಾಹಿತಿ ತಂತ್ರಜ್ಞಾನ (ಐ.ಟಿ) ಪಾರ್ಕ್‌ ನಿರ್ಮಾಣಕ್ಕೆ ನೀಡುವಂತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮನವಿ ಸಲ್ಲಿಸಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿದ್ದ ರಕ್ಷಣಾ ಸಚಿವರನ್ನು ಯಲಹಂಕ ವಾಯ ನೆಲೆಯಲ್ಲಿ ಶುಕ್ರವಾರ ಭೇಟಿಮಾಡಿದ ಉಪ ಮುಖ್ಯಮಂತ್ರಿ, ‘ಬೆಳಗಾವಿಯಲ್ಲಿ 750 ಎಕರೆ ವಿಸ್ತೀರ್ಣದಲ್ಲಿ ಐ.ಟಿ ಪಾರ್ಕ್‌ ನಿರ್ಮಿಸುವ ಪ್ರಸ್ತಾವವಿದೆ. ಇದರಿಂದ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ರಕ್ಷಣಾ ಇಲಾಖೆ ತನ್ನ ಬಳಿ ಇರುವ ಜಮೀನನ್ನು ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಅದರಲ್ಲಿ 750 ಎಕರೆಯನ್ನು ಬಿಟ್ಟುಕೊಟ್ಟರೆ ಐ.ಟಿ ಪಾರ್ಕ್‌ ನಿರ್ಮಾಣ ಮಾಡಲಾಗುವುದು’ ಎಂದು ಮನವಿ ಮಾಡಿದರು.

ಬೆಳಗಾವಿಯಲ್ಲಿ ರಕ್ಷಣಾ ಇಲಾಖೆಯ ಬಳಿ ಇರುವ ಜಮೀನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಅದೇ ಸ್ಥಳದಲ್ಲಿ ಐ.ಟಿ ಪಾರ್ಕ್ ನಿರ್ಮಿಸುವಂತೆ ಸ್ಥಳೀಯ ಆಡಳಿತ, ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ವಿಷನ್‌ ಗ್ರೂಪ್‌ಗಳಿಂದ ಸಲಹೆ ಬಂದಿದೆ. ಈ ಎಲ್ಲ ವಿಚಾರಗಳನ್ನೂ ರಕ್ಷಣಾ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ADVERTISEMENT

2020–21ನೇ ಸಾಲಿನ ಹೊಸ ಮಾಹಿತಿ ತಂತ್ರಜ್ಞಾನ ನೀತಿಯನ್ನು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಅದರ ಭಾಗವಾಗಿಯೇ ಬೆಳಗಾವಿಯಲ್ಲಿ ಐ.ಟಿ ಪಾರ್ಕ್ ನಿರ್ಮಿಸುವ ಪ್ರಸ್ತಾವವನ್ನು ರೂಪಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.