ADVERTISEMENT

‘ಸೇನಾ ಆಧುನೀಕರಣ: ಸ್ಥಳೀಯ ಖಾಸಗಿ ವಲಯಕ್ಕೆ ಆದ್ಯತೆ’: ಬಿ.ಎಸ್. ರಾಜು

ಪ್ರಾದೇಶಿಕ ತಂತ್ರಜ್ಞಾನ ಕೇಂದ್ರದ ಉದ್ಘಾಟನೆ *ಭೂಸೇನಾ ಉಪ ಮುಖ್ಯಸ್ಥ ಬಿ.ಎಸ್. ರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 16:00 IST
Last Updated 14 ನವೆಂಬರ್ 2022, 16:00 IST
ಬೆಂಗಳೂರಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು. (ಎಡದಿಂದ) ಭೂ ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ಆರೋಗ್ಯ ಸಚಿವ ಕೆ. ಸುಧಾಕರ್, ಮೇಜರ್ ಜನರಲ್ ಸಂದೀಪ್ ಮಹಾಜನ್ ಇದ್ದಾರೆ.–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು. (ಎಡದಿಂದ) ಭೂ ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ಆರೋಗ್ಯ ಸಚಿವ ಕೆ. ಸುಧಾಕರ್, ಮೇಜರ್ ಜನರಲ್ ಸಂದೀಪ್ ಮಹಾಜನ್ ಇದ್ದಾರೆ.–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತೀಯ ಸೇನೆಯು ಆಧುನೀಕರಣಕ್ಕೆ ಸಿದ್ಧವಾಗಿದ್ದು, ರಕ್ಷಣಾ ಉತ್ಪಾದನೆಯಲ್ಲಿ ಸ್ಥಳೀಯ ಖಾಸಗಿ ವಲಯಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಭೂಸೇನಾ ಉಪಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್ ಬಿ.ಎಸ್. ರಾಜು ತಿಳಿಸಿದರು.

ಬೆಂಗಳೂರಿನ ಎಎಸ್‌ಸಿ ಸೆಂಟರ್‌ ಆ್ಯಂಡ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರ(ಆರ್‌ಟಿಎನ್‌–ಬಿ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಕ್ಷಣಾ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿಯ (ಆರ್ ಆ್ಯಂಡ್‌ ಡಿ) ಬಜೆಟ್‌ನ ಶೇ 25ರಷ್ಟು ಮೊತ್ತ ಸ್ಥಳೀಯ ಉದ್ಯಮಗಳಲ್ಲಿ ತಯಾರಾಗುವ ವಸ್ತುಗಳಿಗೆ ಮೀಸಲಿಡಲಾಗುವುದು. ನಮ್ಮ ವ್ಯವಹಾರ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ನಾವು ಉತ್ಪನ್ನಗಳ ವಿವರಗಳು ಮತ್ತು ತಯಾರಿಸುವ ಗಡುವು ಸಹ ನೀಡುತ್ತೇವೆ. ರಕ್ಷಣಾ ಇಲಾಖೆಯ 400 ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಿರಲು ಸರ್ಕಾರ ನಿರ್ಧರಿಸಿದ್ದು, ಅವುಗಳನ್ನು ಸ್ಥಳೀಯವಾಗಿ ಉತ್ಪಾದಿಸಬೇಕು. ಇಲ್ಲಿ ಖಾಸಗಿ ವಲಯಗಳಿಗೆ ವಿಪುಲ ಅವಕಾಶಗಳಿದ್ದು, ಎಲ್ಲರೂ ಭಾಗವಹಿಸಬೇಕು’ ಎಂದು ಕರೆ ನೀಡಿದರು.

ADVERTISEMENT

‘ಮುಂಬರುವ ದಶಕಗಳಲ್ಲಿ ಭಾರತೀಯ ಸೇನೆಯು ಆಧುನೀಕರಣಕ್ಕೆ ಸಿದ್ಧವಾಗಿದ್ದು, ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಸ್ಥಳೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಯನ್ನು ಸೃಷ್ಟಿಸಲು ಅವಕಾಶಗಳಿವೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಸೇನೆಯ ರಕ್ಷಣಾ ಅಗತ್ಯವನ್ನು ಪೂರೈಸುವುದು ಈ ಕಾರ್ಯತಂತ್ರದ ಅವಶ್ಯಕತೆಯಾಗಿದೆ’ ಎಂದರು.

‘ಆತ್ಮನಿರ್ಭರ ಭಾರತದ ಅಡಿಯಲ್ಲಿ ಸೇನೆಗೆ ಬೇಕಾಗಿರುವ ತಂತ್ರಜ್ಞಾನದ ಅಭಿವೃದ್ಧಿಗಾಗಿ ಉದ್ಯಮ ಮತ್ತು ಶಿಕ್ಷಣದೊಂದಿಗೆ ತೊಡಗಿಸಿಕೊಳ್ಳಲು ದೆಹಲಿಯಲ್ಲಿ ಸ್ಥಾಪನೆ ಮಾಡಿರುವ ಆರ್ಮಿ ಡಿಸೈನ್‌ ಬ್ಯುರೋ ಈಗ ಫಲ ನೀಡುತ್ತಿದೆ. ರೀಜಿನಲ್ ಟೆಕ್ನಾಲಜಿ ನೋಡ್‌ಗಳು ಅದರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ’ ಎಂದು ಮಾಹಿತಿ ನೀಡಿದರು.

ಆರೋಗ್ಯ ಸಚಿವ ಕೆ. ಸುಧಾಕರ್‌ ಮಾತನಾಡಿ, ‘ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ‘ವೈಮಾನಿಕ ಮತ್ತು ರಕ್ಷಣಾ ನೀತಿ 2022–2027 ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಿಸಿ ಆತ್ಮನಿರ್ಭರತೆ ಸಾಧಿಸಲು ನೆರವಾಗಲಿದೆ. ಆರ್‌ಟಿಎನ್‌–ಬಿ ಸ್ಥಾಪನೆಯಿಂದ ನವೋದ್ಯಮ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಹೊಸ ಅವಕಾಶಗಳನ್ನು ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.