ADVERTISEMENT

ಪದವಿ ಪರೀಕ್ಷೆ: 17ರ ಬಳಿಕ ನಿರ್ಧಾರ

ಪ್ರಥಮ, ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ತೇರ್ಗಡೆ ಭಾಗ್ಯ?

​ಪ್ರಜಾವಾಣಿ ವಾರ್ತೆ
Published 9 ಮೇ 2020, 18:27 IST
Last Updated 9 ಮೇ 2020, 18:27 IST
   

ಬೆಂಗಳೂರು: ‘ಇದೇ 30ರೊಳಗೆ ಎಲ್ಲ ಪದವಿ ತರಗತಿಗಳ ಪಠ್ಯಗಳ ಬೋಧನೆ ಆನ್‌ಲೈನ್‌ನಲ್ಲಿ ಮುಗಿಸಬೇಕು. ಪರೀಕ್ಷೆ ನಡೆಸುವ ಕುರಿತು ಇದೇ 17ರ ನಂತರ ಮತ್ತೊಮ್ಮೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಶನಿವಾರ ವಿಡಿಯೊ ಸಂವಾದ ನಡೆಸಿದ ಅವರು, ‘ಎಲ್ಲ ಪ್ರಾಧ್ಯಾಪಕರು ಕಾಲೇಜಿಗೆ ಬಂದು ಆನ್‌ಲೈನ್‌ ಮೂಲಕ ಪಾಠ ಪ್ರವಚನ ಆರಂಭಿಸಬೇಕು. ಖಾಸಗಿ ಕಾಲೇಜುಗಳು ಇದನ್ನು ಅನುಸರಿಸಬೇಕು’ ಎಂದರು.

‘ಲಾಕ್‌ಡೌನ್‌ನಿಂದ ಪದವಿ ಪರೀಕ್ಷೆ ಕುರಿತ ಗೊಂದಲ ನಿವಾರಣೆ ಆಗಿಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ತೇರ್ಗಡೆ ಮಾಡಬಹುದು ಎಂಬ ಸಲಹೆ ಬಂದಿದೆ. ಆದರೆ, ಈ ಬಗ್ಗೆ ಮೇ 17ರ ನಂತರ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಏಕರೂಪ ಪಠ್ಯಕ್ರಮ: ‘ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಜಾರಿ ಗೊಳಿಸಲು ಉದ್ಧೇಶಿಸಿರುವ ಏಕರೂಪದ ಪಠ್ಯಕ್ರಮದ ಬಗ್ಗೆ 15 ದಿನದೊಳಗೆ ವರದಿ ಸಲ್ಲಿಸುವಂತೆ ಹೊಸದಾಗಿ ರಚಿಸಲಾಗಿರುವ ತಜ್ಞರ ಸಮಿತಿಗಳಿಗೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.