ADVERTISEMENT

ದೆಹಲಿ ಸ್ಫೋಟಕ್ಕೂ ಜೈಲಿನಲ್ಲಿರುವ ಉಗ್ರನಿಗೂ ನಂಟು: ಆರ್.ಅಶೋಕ

ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 16:28 IST
Last Updated 11 ನವೆಂಬರ್ 2025, 16:28 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು:‘ದೆಹಲಿ ಸ್ಫೋಟಕ್ಕೂ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮೊಬೈಲ್‌ ಬಳಸುತ್ತಿದ್ದ ಉಗ್ರಗಾಮಿಗೂ ನಂಟು ಇರಬಹುದು. ಈ ಬಗ್ಗೆ ಎನ್‌ಐಎಯಿಂದ ಆಳವಾದ ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ.

‘ದೆಹಲಿಯಲ್ಲಿ ನಡೆದಿರುವ ಘಟನೆ ಭಯೋತ್ಪಾದನಾ ಕೃತ್ಯ ಎಂಬ ದಟ್ಟ ಅನುಮಾನವಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರಗಾಮಿ ಮೊಬೈಲ್‌ ಬಳಸಿರುವುದೂ ಪತ್ತೆಯಾಗಿದೆ. ಹೆಚ್ಚು ತನಿಖೆ ನಡೆಸಿದರೆ ಇನ್ನಷ್ಟು ಹೊಸ ವಿಚಾರಗಳು ಹೊರಬರಬಹುದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ವೈದ್ಯರೂ ಸೇರಿದಂತೆ ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ. ಅಧಿಕಾರಕ್ಕೆ ಬರಲು ಓಲೈಕೆ ಮಾಡುವುದರಿಂದ ಹೀಗೆಲ್ಲ ಆಗುತ್ತಿದೆ. ಕಾರಾಗೃಹದಲ್ಲಿರುವ ಉಗ್ರವಾದಿಗಳು ಮೊಬೈಲ್‌ ಬಳಸುವಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದಕ್ಕೆ ಕಾಂಗ್ರೆಸ್‌ನ ತಪ್ಪೇ ಕಾರಣ’ ಎಂದು ದೂರಿದರು.

ADVERTISEMENT

‘ಈಗ ಇರುವುದು ಮನಮೋಹನ್‌ ಸಿಂಗ್ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಈ ಸರ್ಕಾರದಲ್ಲಿ ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಈ ಘಟನೆಯ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸಲಿದೆ. ಕಾಂಗ್ರೆಸ್ ಇದ್ದಾಗ ದೇಶದಲ್ಲಿ ನಕ್ಸಲ್ ಚಟುವಟಿಕೆ ಅಧಿಕವಾಗಿತ್ತು. ಅದನ್ನು ಗೃಹ ಸಚಿವ ಅಮಿತ್‌ ಶಾ ಬಹುತೇಕ ನಿರ್ಮೂಲನೆ ಮಾಡಿದ್ದಾರೆ. ಅದೇ ರಿತಿ ಭಯೋತ್ಪಾದನೆ ಕೂಡ ನಿರ್ಮೂಲನೆಯಾಗಲಿದೆ’ ಎಂದರು.

ಸಿ ಟಿ ರವಿ
ಛಲವಾದಿ ನಾರಾಯಣಸ್ವಾಮಿ

ಪ್ರಿಯಾಂಕ್‌ಗೆ ಇರೋದೇ ದುರ್ಬುದ್ಧಿ: ಸಿ.ಟಿ.ರವಿ ‘ಪ್ರಿಯಾಂಕ್ ಖರ್ಗೆಗೆ ಇರೋದೇ ದುರ್ಬುದ್ಧಿ. ಆತ ಮೂರ್ಖ ಬೇರೆ. ಮೂರ್ಖ ಮತ್ತು ದುರ್ಬುದ್ಧಿ ಇರುವವರಿಗೆ ಬುದ್ದಿ ಹೇಳಿದರೆ ಉಪಯೋಗ ಆಗದು. ಇಂತಹವರಿಗೆ ಯಾರೂ ಬುದ್ಧಿ ಹೇಳಲು ಆಗದು’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹರಿಹಾಯ್ದಿದ್ದಾರೆ. ‘ದೆಹಲಿ ಸ್ಫೋಟಕ್ಕೆ ಕೇಂದ್ರದ ವೈಫಲ್ಯವೇ ಕಾರಣ ಮತ್ತು ಅಮಿತ್‌ ಶಾ ದುರ್ಬಲ ಗೃಹ ಮಂತ್ರಿ’ ಎಂಬ ಪ್ರಿಯಾಂಕ್ ಹೇಳಿಕೆಗೆ ರವಿ ಕಟುವಾಗಿ ಪ್ರತಿಕ್ರಿಯಿಸಿದರು. ‘ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗ ಭಯೋತ್ಪಾದನೆ ದಾಳಿ ನಿತ್ಯದ ಸುದ್ದಿಯಾಗಿತ್ತು. ದೇಶದ ವಿವಿಧೆಡೆ ಬಾಂಬ್‌ ಸ್ಫೋಟ ಮತ್ತು ದಾಳಿಗಳು ನಡೆಯುತ್ತಿದ್ದವು. ಆಗ ಭಯೋತ್ಪಾದಕರ ಪರ ಸಹಾನುಭೂತಿ ಇದ್ದ ಸರ್ಕಾರವಿತ್ತು. ಈಗ ಭಯೋತ್ಪಾದಕರನ್ನು ಸದೆ ಬಡಿಯುವ ಸರ್ಕಾರವಿದೆ. ಯಾವುದೇ ಭಯೋತ್ಪಾದಕರನ್ನು ಉಳಿಸುವ ಪ್ರಶ್ನೆಯೇ ಇಲ್ಲ’ ಎಂದರು.

‘ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆ?’

‘ಬೆಂಕಿ ಬಿದ್ದಾಗಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ‘ದೆಹಲಿಯ ಬಾಂಬ್‌ ಸ್ಫೋಟ ಬಿಹಾರದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಬಿಜೆಪಿಗೆ ಹೊಡೆತ ಬೀಳಲಿದೆ ಇಂಡಿಯಾ ಒಕ್ಕೂಟಕ್ಕೆ ಉತ್ತಮ ಫಲಿತಾಂಶ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆ ಬೇಸರ ಹುಟ್ಟಿಸುವಂತಹದ್ದು’ ಎಂದು ಅವರು ಹೇಳಿದ್ದಾರೆ. ‘ಭಯೋತ್ಪಾದಕ ಘಟನೆಯ ವಿಚಾರದಲ್ಲಿ ರಾಜಕೀಯ ಮತ್ತು ಚುನಾವಣೆ ವಿಷಯ ಬೆರೆಸಬಾರದಿತ್ತು. ಇವರು ಅವಿವೇಕದ ಹೇಳಿಕೆ ನೀಡಿದ್ದಾರೆ. ಅವರು ಜನರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.