ADVERTISEMENT

ಉದ್ದೇಶಪೂರ್ವಕ ದೋಷಾರೋಪ ಪಟ್ಟಿ: ಹೈಕೋರ್ಟ್‌ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 15:44 IST
Last Updated 17 ಅಕ್ಟೋಬರ್ 2025, 15:44 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೋಷಪೂರಿತ ಮತ್ತು ಆರೋಪಿಗಳು ನುಣುಚಿಕೊಳ್ಳಲು ಸಹಾಯವಾಗುವಂತಹ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಇದೆಲ್ಲಾ ಅವರಿಗೆ ಗೊತ್ತಿಲ್ಲ ಎಂದು ಹೇಳಲಾಗದು’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಮ್ಮ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅಧಿಕಾರಿಗಳ ಇಂತಹ ನಡೆಯ ಬಗ್ಗೆ ಎಚ್ಚರ ವಹಿಸಬೇಕಿದೆ’ ಎಂದು ಹೇಳಿದೆ.

‘ಪ್ರಕರಣ ದಾಖಲಿಸಬೇಕು, ಅದು ವಿಫಲವಾಗಲಿ ಎಂಬುದು ಅಧಿಕಾರಿಗಳ ಧೋರಣೆಯಾಗಿರುತ್ತದೆ. ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳು ಭಾರತೀಯ ದಂಡ ಸಂಹಿತೆ–1860ರ ಕಲಂ 171 (ಎಚ್) ಅಪರಾಧಕ್ಕೆ ಅನ್ವಯಿಸುವುದಿಲ್ಲ. ಆದರೆ, ಐಪಿಸಿ ಕಲಂ 188ರ ಅಡಿ ಒಳಪಡುತ್ತವೆ. ಹೀಗಾಗಿ, ನ್ಯಾಯಿಕ ಪ್ರಕ್ರಿಯೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ರಾಜ್ಯ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌ ವಾದ ಮಂಡಿಸಿದರು.

ADVERTISEMENT

ಏನಿದು ಪ್ರಕರಣ?

ಪ್ರತಾಪ್ ಸಿಂಹ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಅನುಮತಿ ಪಡೆಯದೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರದ ಸಮೀಪ ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಬೈಕ್‌ ರ್‍ಯಾಲಿ ನಡೆಸಿದ್ದರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.