ADVERTISEMENT

ಇಲಾಖಾ ಪರೀಕ್ಷೆ ಮುಂದೂಡಲು ಆಗ್ರಹ

ಕೊರೊನಾ ಮಧ್ಯೆ 17ರಿಂದ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 8:20 IST
Last Updated 10 ಜುಲೈ 2020, 8:20 IST

ಬೆಂಗಳೂರು: ಕೊರೊನಾ ಸೋಂಕು ಹರಡುತ್ತಿರುವ ಮಧ್ಯೆ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಜುಲೈ 17ರಿಂದ ಮೂರು ಹಂತಗಳಲ್ಲಿ ನಡೆಸಲು ಮುಂದಾಗಿರುವುದು ಸರ್ಕಾರಿ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ, ಏಪ್ರಿಲ್‌ 11ರಿಂದ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ಲಾಕ್‌ಡೌನ್‌ ಘೋಷಿಸಿದ್ದರಿಂದ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿತ್ತು. ಜುಲೈ 1ರಂದು ಪ್ರಕಟಣೆ ಹೊರಡಿಸಿರುವ ಕೆಪಿಎಸ್‌ಸಿ, ಜುಲೈ 17ರಿಂದ ಆಗಸ್ಟ್‌ 11ರವರೆಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

ಪ್ರಥಮ ಹಂತದ ಪರೀಕ್ಷೆಗಳು 17ರಿಂದ 20ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ದ್ವಿತೀಯ ಹಂತದ ಪರೀಕ್ಷೆಗಳು 21ರಿಂದ 29ರವರೆಗೆ ಹಾಗೂ ಆಗಸ್ಟ್‌ 11ರಂದು ಬೆಂಗಳೂರು, ಬೆಳಗಾವಿ, ಕಲಬುರ್ಗಿ, ಮೈಸೂರು, ಶಿವಮೊಗ್ಗ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ತೃತೀಯ ಹಂತದಲ್ಲಿ ಆಗಸ್ಟ್‌ 3ರಿಂದ 8ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಪರೀಕ್ಷೆಗಳು ನಡೆಯಲಿವೆ.

ADVERTISEMENT

ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ನೌಕರರು, ಗೃಹ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ನೌಕರರು ಸೇರಿ ಸುಮಾರು 28 ಸಾವಿರ ಮಂದಿ ಕಡ್ಡಾಯ ಮತ್ತು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ಕೊರೊನಾ ಹರಡುತ್ತಿರುವುದರಿಂದ ಪರೀಕ್ಷೆ ಮುಂದೂಡುವಂತೆ ಹಲವು ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.