ADVERTISEMENT

ಶಾಶ್ವತ ಅಲೆಮಾರಿ ಆಯೋಗ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 16:00 IST
Last Updated 23 ಜೂನ್ 2023, 16:00 IST

ಬೆಂಗಳೂರು: ಅಲೆಮಾರಿ ಜನಾಂಗದ ಸ್ಥಿತಿಗತಿಗಳ ಸುಧಾರಣೆಗೆ ಶಾಶ್ವತ ಅಲೆಮಾರಿ ಆಯೋಗ ರಚಿಸಬೇಕು ಎಂದು ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಎಸ್‌ಸಿ, ಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಹಾಗೂ ಹಿಂದುಳಿದ ಅಲೆಮಾರಿಗಳ ಸಮನ್ವಯ ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.

ಅಲೆಮಾರಿ ಜನಾಂಗಗಳು ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿವೆ. ಪ್ರಸ್ತುತ ಜನಾಂಗದ ಅಭಿವೃದ್ಧಿಗೆ ಇರುವ ಕಾರ್ಯಕ್ರಮಗಳ ಜತೆಗೆ ಹೆಚ್ಚುವರಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು, ಸ್ಥಿತಿಗತಿಗಳ ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ತಜ್ಞರು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅಲೆಮಾರಿ ಆಯೋಗ ರಚನೆಯ ಅಗತ್ಯವಿದೆ ಎಂದು ಮುಖಂಡರಾದ ವೆಂಕಟರಮಣಯ್ಯ, ಇಂದೂಧರ ಹೊನ್ನಾಪುರ, ಕಿರಣ್‌ ಕುಮಾರ್‌ ಕೊತ್ತಗೆರೆ, ಮಂಜುನಾಥ್ ದಾಯತ್ಕರ್, ವೆಂಕಟೇಶ ದೊರ, ಬಸವರಾಜು ನಾರಯಣಂಕರ್, ಲೋಹಿತಾಕ್ಷ, ಗೋಪಾಲಕೃಷ್ಣ, ಸಿದ್ದಪ್ಪಾಜಿ ಕಮ್ಮಾರ, ರಾಘವೇಂದ್ರ ಮುಕ್ರಿ, ಶೇಖರ್‌ ಜಟ್ಟಿ ಹಳ್ಳೇರ್‌ ಪ್ರತಿಪಾದಿಸಿದರು.

ರಾಜ್ಯದಲ್ಲಿ ಅಲೆಮಾರಿಗಳಿಗೆ ಜಾತಿ ಪ್ರಮಾಣ ಪತ್ರ ಸಿಗುವಲ್ಲೂ ತೊಡಕುಗಳಿವೆ. ನಿರ್ದಿಷ್ಟ ನೆಲೆ ಮತ್ತು ವೃತ್ತಿ ಇಲ್ಲದ ಕಾರಣ ಸಮೀಕ್ಷೆಗಳಲ್ಲೂ ನಿಖರ ಮಾಹಿತಿ ಸಿಕ್ಕಿಲ್ಲ. ಪಾರಂಪರಿಕ ಕಸಬುಗಳೂ ರೂಪಾಂತರಗೊಂಡಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆ ಸಮೀಕ್ಷೆ ನಡೆಸಬೇಕು. ವಸ್ತುನಿಷ್ಠ ವರದಿ ಸಿದ್ದಪಡಿಸಬೇಕು. ಅಲೆಮಾರಿ ಜನರ ಅಸ್ಮಿತೆಗೆ ಜೀವತುಂಬಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ADVERTISEMENT

ಸಮುದಾಯಗಳ ಕುಲಃಶಾಸ್ತ್ರ ಅಧ್ಯಯನ ನಡೆಸಬೇಕು. ಪರ್ಯಾಯ ಹೆಸರುಗಳನ್ನು ಗುರುತಿಸಿ, ಅಲೆಮಾರಿಗಳಿಗೆ ಜಾತಿಪತ್ರ ನೀಡಬೇಕು. ನಾಗರಿಕ ಸೌಲಭ್ಯ ಕಲ್ಪಿಸಬೇಕು. ಶಾಶ್ವತ ವಸತಿ ಕಲ್ಪಿಸಲು ಬಜೆಟ್‌ನಲ್ಲಿ ಇಟ್ಟಿದ್ದ ₹ 550 ಕೋಟಿಯನ್ನು ಬಳಕೆ ಮಾಡಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ಮನೆ ನಿರ್ಮಿಸಿಕೊಡಬೇಕು ಎಂದೂ ಆಗ್ರಹಿಸಿದ್ದಾರೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.