ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಒಗ್ಗಟ್ಟು

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 19:31 IST
Last Updated 11 ಜುಲೈ 2022, 19:31 IST
ಚಿತ್ರದುರ್ಗದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಮೇದಾರ ಗುರುಪೀಠದ ಮೇದಾರ ಕೇತೇಶ್ವರ ಸ್ವಾಮೀಜಿ, ಬಹುಜನ ಸಮಾಜ ಪಕ್ಷದ ಮುಖಂಡ ಮಾರಸಂದ್ರ ಮುನಿಯಪ್ಪ ಪಾಲ್ಗೊಂಡಿದ್ದರು
ಚಿತ್ರದುರ್ಗದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಮೇದಾರ ಗುರುಪೀಠದ ಮೇದಾರ ಕೇತೇಶ್ವರ ಸ್ವಾಮೀಜಿ, ಬಹುಜನ ಸಮಾಜ ಪಕ್ಷದ ಮುಖಂಡ ಮಾರಸಂದ್ರ ಮುನಿಯಪ್ಪ ಪಾಲ್ಗೊಂಡಿದ್ದರು   

ಚಿತ್ರದುರ್ಗ/ಹುಬ್ಬಳ್ಳಿ/ಕಲಬುರಗಿ:ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ನೀಡಿದ ವರದಿಯನ್ನು ಜಾರಿ ಗೊಳಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಚಿತ್ರದುರ್ಗದಲ್ಲಿ ವಿವಿಧ ಮಠಾ ಧೀಶರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಜಿಲ್ಲಾಧಿ ಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಹಿರಂಗ ಸಭೆ ನಡೆಸಿದ ಪ್ರತಿಭಟನಕಾರರು ನಾಗಮೋಹನ ದಾಸ್‌ ಸಮಿತಿ ವರದಿ ಜಾರಿಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂಬ ಸಂದೇಶ ರವಾನಿಸಿದರು. ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಮೇದಾರ ಗುರುಪೀಠದ ಮೇದಾರ ಕೇತೇಶ್ವರ ಸ್ವಾಮೀಜಿ ಇದ್ದರು.

ADVERTISEMENT

ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದು, ತಳ್ಳಾಟ,ನೂಕಾಟ ಉಂಟಾಗಿತ್ತು. ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ನೂರಾರು ಜನ ಜಿಲ್ಲಾಧಿಕಾರಿ ಕಚೇರಿ ಗೇಟ್‌ಗೆ ಬೀಗ ಜಡಿದು, ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕೆಲವೆಡೆ ರಸ್ತೆ ತಡೆ ನಡೆಸಿದರು.

ಸರ್ಕಾರ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಎಸ್‌ಸಿ, ಎಸ್‌ಟಿ ಸಮಾಜದ ಸಚಿವ, ಶಾಸಕರ ರಾಜೀನಾಮೆಗೆ ಒತ್ತಾಯಿಸಿದರು.

ಕೊಪ್ಪಳದಲ್ಲಿ ಕರ್ನಾಟಕ ಸ್ವಾಭಿ ಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಮುಂದಾದಾಗ, ಅವರನ್ನು ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ತಡೆಯಲು ಪ್ರಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.