
ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಹಲವು ಹಂತದ, ಹಲವು ಆಯಾಮದ ಬಿಕ್ಕಟ್ಟುಗಳು ಎದುರಾಗುತ್ತಿವೆ. ಅವುಗಳನ್ನು ಗುರುತಿಸುವಲ್ಲಿ ನಾವು ಸೋಲುತ್ತಿದ್ದೇವೆ. ಅವುಗಳನ್ನು ಗುರುತಿಸಿ, ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾತಂತ್ರ ಅಂತ್ಯವಾಗುತ್ತದೆ ಎಂಬ ಕಳವಳ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ‘ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ’ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಅಧಿಕಾರ ವಿಕೇಂದ್ರೀಕರಣದ ಕಡೆಗಣನೆ, ಅಸಹಿಷ್ಣುತೆ, ಭಿನ್ನಮತ ಕುರಿತಾದ ಅಸಹನೆಗಳು ಪ್ರಜಾತಂತ್ರವನ್ನು ಅಳಿವಿನ ಹಾದಿಗೆ ಕರೆದೊಯ್ಯುತ್ತಿವೆ ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳು ತೆರೆದಿಟ್ಟರು.
ಯಾವುದೇ ಸರ್ಕಾರದಲ್ಲಿ ಭಿನ್ನಮತ ಮತ್ತು ಪ್ರತಿರೋಧಕ್ಕೆ ಆಡಳಿತ ವ್ಯವಸ್ಥೆ ಹೇಗೆ ಸ್ಪಂದಿಸುತ್ತದೆ ಎಂಬುದರ ಮೇಲೆ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆರಾಜಾರಾಮ್ ತೋಳ್ಪಾಡಿ ಪ್ರಾಧ್ಯಾಪಕ
ಬಿಕ್ಕಟ್ಟುಗಳು ಎಲ್ಲ ಕಾಲಕ್ಕೂ ಇದ್ದವು. ಆದರೆ ಅವುಗಳ ತೀವ್ರತೆ ಭಿನ್ನವಾಗಿರುತ್ತದೆ. ಬೇರೆ–ಬೇರೆ ಸ್ವರೂಪದಲ್ಲಿ ಬರುವ ಬಿಕ್ಕಟ್ಟುಗಳನ್ನು ನಾವು ಹೇಗೆ ಎದುರುಗೊಳ್ಳುತ್ತೇವೆ ಎಂಬುದರ ಮೇಲೆ ಅವುಗಳ ಅಪಾಯದ ಮಟ್ಟ ನಿರ್ಧಾರವಾಗುತ್ತದೆಅಗ್ರಹಾರ ಕೃಷ್ಣಮೂರ್ತಿ ಚಿಂತಕ
ಚುನಾವಣಾ ರಾಜಕಾರಣದಲ್ಲಿ ವಿಧಾನಸಭೆಗಳಲ್ಲಿ ಲೋಕಸಭೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕುಗ್ಗುತ್ತಿರುವುದೂ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ಸೂಚಿಸುತ್ತದೆಆಯಿಷಾ ಫರ್ಝಾನ ಕಾಂಗ್ರೆಸ್ ವಕ್ತಾರೆ
‘ಪಂಚಾಯತಿ ವ್ಯವಸ್ಥೆ ಕಡೆಗಣನೆ’
ಪ್ರಜಾಪ್ರಭುತ್ವ ಎಂಬುದು ಈಗ ಶಾಸಕರು ಮತ್ತು ಸಂಸದರು ಎಂಬುದಕ್ಕಷ್ಟೇ ಸೀಮಿತವಾಗಿದೆ. ಅಧಿಕಾರ ವಿಕೇಂದ್ರೀಕರಣದ ಬಹುಮುಖ್ಯ ಹಂತವಾದ ಪಂಚಾಯತ್ ವ್ಯವಸ್ಥೆಯನ್ನು ಎಲ್ಲರೂ ಕಡೆಗಣಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಬಂದಿರುವ ಅತ್ಯಂತ ದೊಡ್ಡ ಬಿಕ್ಕಟ್ಟು. ಗ್ರಾಮ ತಾಲ್ಲೂಕು ಜಿಲ್ಲಾ ಪಂಚಾಯತ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರೂ ಜನರ ಪ್ರತಿನಿಧಿಗಳು ಎಂಬುದನ್ನು ಮರೆಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಈ ತಳಮಟ್ಟದ ಜನಪ್ರತಿನಿಧಿಗಳ ಅಧಿಕಾರಗಳೂ ತಮ್ಮಲ್ಲಿಯೇ ಇರಬೇಕು ಎಂಬಂತೆ ಶಾಸಕರು–ಸಂಸದರು ವರ್ತಿಸುತ್ತಿದ್ದಾರೆ. ಹೀಗಾಗಿಯೇ ಗ್ರಾಮ ಪಂಚಾಯತಿ ಚುನಾವಣೆಗಳು ವಿಳಂಬವಾಗುತ್ತಿವೆ. ಬಿಬಿಎಂಪಿ ಚುನಾವಣೆ ನಡೆಸಲಿಲ್ಲ. ಈ ಅಪಾಯವನ್ನು ನಾವು ಅರಿತುಕೊಳ್ಳಬೇಕು. ಬಿ.ಎಲ್.ಶಂಕರ್ ಕೆಪಿಸಿಸಿ ಉಪಾಧ್ಯಕ್ಷ
‘ಪ್ರತಿಭಟಿಸುವವರು ದೇಶದ್ರೋಹಿಗಳೆ’
ಪ್ರಜಾಪ್ರಭುತ್ವವು ಬಿಕ್ಕಟ್ಟಿನಲ್ಲಿ ಇದೆ ಅಥವಾ ಇಲ್ಲ ಎಂಬ ಎರಡು ಪ್ರತಿಪಾದನೆಗಳ ನಡುವಣ ಸ್ಥಿತಿಯಲ್ಲಿ ನಾವಿದ್ದೇವೆ. ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬುದನ್ನು ಬೇರೆ–ಬೇರೆ ಸಂಗತಿಗಳ ಮೂಲಕ ನಾವು ಕಂಡುಕೊಳ್ಳಬೇಕಾಗುತ್ತದೆ. ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಕರೆಯುವುದಾದರೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನಿಸಿದ ವ್ಯಕ್ತಿಯನ್ನು ದೇಶಪ್ರೇಮಿ ಎನ್ನುವುದಾದರೆ ಆಳುವವರಿಗೆ ಪ್ರತಿಭಟನೆಗಳು ಮತ್ತು ಪ್ರಶ್ನಿಸುವವರನ್ನು ಕಂಡರೆ ಭಯವಿರುವುದಾದರೆ ಪ್ರಜಾಪ್ರಭುತ್ವವು ಬಿಕ್ಕಟ್ಟಿನ ಹಾದಿಯಲ್ಲಿ ಇದೆ ಎಂದೇ ಅರ್ಥ. ಎ.ನಾರಾಯಣ ಪ್ರಾಧ್ಯಾಪಕ
ಗೋಷ್ಠಿ ಮಧ್ಯೆ ವಾಗ್ವಾದ ‘
ಲೋಕಸಭೆ ರಾಜ್ಯಸಭೆ ರಾಜ್ಯಗಳ ವಿಧಾನಸಭೆಯಲ್ಲಿ ಈಚಿನ ದಿನಗಳಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ. ವಿರೋಧ ಪಕ್ಷಗಳು ಬರಿಯ ಗಲಾಟೆ–ಗದ್ದಲ ಮಾಡುತ್ತವೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಹೇಳಿದರು. ಇದಕ್ಕೆ ಸಭಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಮುಂದುವರೆದು ‘ಆರ್‌ಎಸ್‌ಎಸ್ ಒಂದು ಸಾಂಸ್ಕೃತಿಕ ಸಂಘಟನೆ ಎಂದು ನೀವು ಹೇಳಿಕೊಳ್ಳುತ್ತೀರಿ. ಆದರೆ ವಾಸ್ತವದಲ್ಲಿ ಅದು ಹಿಂದೂ ಸಂಘಟನೆ. ಅದನ್ನು ಮತ್ತು ಬಿಜೆಪಿಯು ಆರ್‌ಎಸ್‌ಎಸ್ ರಾಜಕೀಯ ಅಂಗ ಎಂಬುದನ್ನು ಘಂಟಾಘೋಷವಾಗಿ ಹೇಳಿಬಿಡಿ’ ಎಂದು ಒತ್ತಾಯಿಸಿದರು. ಪ್ರಕಾಶ್ ಅವರು ‘ಆರ್‌ಎಸ್‌ಎಸ್‌ಗೂ ಬಿಜೆಪಿಗೂ ಸಂಬಂಧವಿಲ್ಲ’ ಎಂದರು. ಇದನ್ನು ಒಪ್ಪದ ಸಭಿಕರು ‘ಪ್ರಧಾನಿ ಬಿಜೆಪಿ ಶಾಸಕರು ಆರ್‌ಎಸ್‌ಎಸ್ ಶಾಖೆ ಮತ್ತು ಕಾರ್ಯಕ್ರಮಗಳಿಗೆ ಹೋಗುವುದು ಏಕೆ’ ಎಂದು ಪ್ರಶ್ನಿಸಿದರು. ಅಲ್ಲಿಗೆ ಗೋಷ್ಠಿಯನ್ನು ಬರಖಾಸ್ತು ಮಾಡಲಾಯಿತು. ಮುಖ್ಯ ವೇದಿಕೆಯ ಹೊರಗೂ ಪ್ರಕಾಶ್ ಆಯಿಶಾ ಫರ್ಝಾನ ಮತ್ತು ಬಿ.ಎಲ್.ಶಂಕರ್ ಅವರನ್ನು ತಡೆಗಟ್ಟಿದ ಕೆಲ ಸಭಿಕರು ‘ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಪಟ್ಟು ಹಿಡಿದರು. ಅಲ್ಲಿಗೆ ಬಂದ ಪೊಲೀಸರು ಎಲ್ಲರನ್ನೂ ಆವರಣದಿಂದ ಹೊರಗೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.