ADVERTISEMENT

ಡೆಂಗಿ ಪ್ರಕರಣ: ರಾಜ್ಯದಲ್ಲಿ ಶೇ 81ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 14:46 IST
Last Updated 25 ನವೆಂಬರ್ 2025, 14:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರ: ಕಳೆದ ವರ್ಷ ರಾಜ್ಯದ ಜನರನ್ನು ಕಾಡಿದ್ದ ಡೆಂಗಿ ಜ್ವರ ಪ್ರಕರಣಗಳು, ಈ ವರ್ಷ ಶೇ 81 ರಷ್ಟು ಇಳಿಕೆಯಾಗಿವೆ.

ಆರೋಗ್ಯ ಇಲಾಖೆ ಪ್ರಕಾರ, ಕಳೆದ ವರ್ಷ ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಜ್ವರದ ತೀವ್ರತೆಗೆ 24 ಮಂದಿ ಮೃತಪಟ್ಟಿದ್ದರು. ಈ ವರ್ಷ ಈವರೆಗೆ 6,595 ಪ್ರಕರಣಗಳು ವರದಿಯಾಗಿವೆ. ಈ ಜ್ವರದಿಂದ ಯಾವುದೇ ಮರಣ ಪ್ರಕರಣ ದೃಢಪಟ್ಟಿಲ್ಲ. 

ಹಗಲಿನಲ್ಲಿ ಕಚ್ಚುವ ಈಡೀಸ್‌ ಈಜಿಪ್ಟಿ ಸೊಳ್ಳೆಗಳಿಂದ ಡೆಂಗಿ ಜ್ವರ ಹರಡುತ್ತದೆ. ಈ ವರ್ಷ 1.98 ಲಕ್ಷಕ್ಕೂ ಅಧಿಕ ಡೆಂಗಿ ಶಂಕಿತರನ್ನು ಈವರೆಗೆ ಗುರುತಿಸಲಾಗಿದ್ದು, ಅವರಲ್ಲಿ 95 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ದೃಢ ಪ್ರಕರಣಗಳಲ್ಲಿ ಜಿಬಿಎ ವ್ಯಾಪ್ತಿಯಲ್ಲಿಯೇ 3,213 ಪ್ರಕರಣಗಳು ಖಚಿತಪಟ್ಟರೆ, ರಾಜ್ಯದ ಉಳಿದ ಪ್ರದೇಶಗಳಿಂದ 3,382 ಪ್ರಕರಣಗಳು ವರದಿಯಾಗಿವೆ. 

ADVERTISEMENT

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಕಲಬುರಗಿ (448), ತುಮಕೂರು (205), ದಕ್ಷಿಣ ಕನ್ನಡ (175), ಬೆಂಗಳೂರು ನಗರ (169), ವಿಜಯಪುರ (168), ಬಳ್ಳಾರಿ (164), ಉಡುಪಿ (150) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ.   

‘ಡೆಂಗಿ ಪೀಡಿತ ಪ್ರದೇಶದಲ್ಲಿ ಜಾಗೃತಿ, ಪ್ರತಿ ಶುಕ್ರವಾರ ಡೆಂಗಿ ತಡೆಗಟ್ಟುವಿಕೆ ದಿನಾಚರಣೆ, ಲಾರ್ವಾ ಉತ್ಪತ್ತಿ ತಾಣಗಳನ್ನು ಮೂಲದಲ್ಲಿಯೇ ನಾಶಪಡಿಸುವಿಕೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳಿಂದ ಈ ವರ್ಷ ಡೆಂಗಿ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ರಾಜ್ಯದಲ್ಲಿ ಈ ವರ್ಷ 974 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. 44 ಸಾವಿರ ಚಿಕೂನ್‌ಗುನ್ಯಾ ಶಂಕಿತರಲ್ಲಿ 21 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.