ADVERTISEMENT

ಪ್ರಧಾನಿ ಮೋದಿಗೆ ಕಡತ ಕಳುಹಿಸುತ್ತೇನೆ: ಎಚ್‌.ಡಿ.ಕುಮಾರಸ್ವಾಮಿ

ಕಡೇ ದಿನ ನಡೆಯದ ಕಲಾಪ; ಜೆಡಿಎಸ್‌ ಧರಣಿ– ಗದ್ದಲ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 11:42 IST
Last Updated 23 ಸೆಪ್ಟೆಂಬರ್ 2022, 11:42 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ಬಿಎಂಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಬೈಲಾ ಉಲ್ಲಂಘಿಸಿ ಟ್ರಸ್ಟಿಗಳ ನೇಮಕ, ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂಲಿ ಮತ್ತು ಜಮೀನು ಅಕ್ರಮಕ್ಕೆ ಸಂಬಂಧಿಸಿದ ಎಲ್ಲ ಕಡತಗಳು ಮತ್ತು ದಾಖಲೆಗಳನ್ನು ಸದ್ಯವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಳುಹಿಸಿ ತನಿಖೆಗೆ ಒತ್ತಾಯಿಸುವುದಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಸಭಾ ಅಧಿವೇಶನವನ್ನು ಶುಕ್ರವಾರ ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದಯಾನಂದ ಪೈ ಮತ್ತು ರಾಗಿಣಿ ನಾರಾಯಣ ಅವರು ಶಿಕ್ಷಣ ಸಂಸ್ಥೆಯ ಸಂಪೂರ್ಣ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರ ಬೆಂಬಲವಿದೆ ಮತ್ತು ಹಿಂದಿನ ಮುಖ್ಯಮಂತ್ರಿಯವರ ಅವಧಿಯಲ್ಲಿ ಕಾಣದ ಕೈಗಳು ಟ್ರಸ್ಟಿಗಳ ಬದಲಾವಣೆಗೆ ಸಂಬಂಧಿದಂತೆ ಕಡತಕ್ಕೆ ಸಹಿ ಹಾಕಿಸಿಕೊಂಡಿವೆ. ಭಾರಿ ಅಕ್ರಮ ನಡೆದಿರುವುದರಿಂದ ಟ್ರಸ್ಟ್ ಮತ್ತು ಟ್ರಸ್ಟ್‌ನ ಎಲ್ಲ ಸ್ವತ್ತುಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭಗೊಂಡಾಗ ಜೆಡಿಎಸ್‌ ಸದಸ್ಯರು ಭಿತ್ತಿ ಫಲಕ ಹಿಡಿದರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಮುಂದುವರಿಸಿದರು. ಉನ್ನತ ಶಿಕ್ಷಣ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಇದೊಂದು ಗಂಭೀರ ಪ್ರಕರಣ. ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸದೇ ಎಡವಿದೆ. ಸದನದಲ್ಲಿ ನಾವು ಇಟ್ಟ ದಾಖಲೆಗಳಿಗೆ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡಿದೆ. ತನಿಖೆಗೆ ಆದೇಶಿಸದೇ ಇದ್ದರೆ ನಾವು ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ನವರು ಧರಣಿ ಮಾಡುತ್ತಿದ್ದಾರೆ. ತನಿಖೆಗೂ ಒತ್ತಾಯಿಸಿದ್ದಾರೆ. ನಿಮ್ಮ ಕೊಠಡಿಗೆ ಕರೆಸಿ ಮಾತುಕತೆ ಮಾಡಿ ಇತ್ಯರ್ಥ ಮಾಡಿ ಎಂದು ಸಲಹೆ ನೀಡಿದರು. ಅದಕ್ಕೆ ಒಪ್ಪಿದ್ದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಕೊಠಡಿಗೆ ಕುಮಾರಸ್ವಾಮಿ ಮತ್ತು ಇತರ ಶಾಸಕರನ್ನು ಕರೆಸಿ ಮಾತುಕತೆ ನಡೆಸಿದರು. ಸಾಕಷ್ಟು ಸಮಯ ಮಾತುಕತೆ ಮಾಡಿದರೂ ಸರ್ಕಾರ ತನಿಖೆಗೆ ಒಪ್ಪಲಿಲ್ಲ. ಮತ್ತೆ ಕಲಾಪ ಸೇರಿದಾಗ ಜೆಡಿಎಸ್‌ ಧರಣಿ ಮುಂದುವರೆಸಿದರು. ಜೆಡಿಎಸ್‌ ಸದಸ್ಯರ ಕೂಗಾಟ ಹೆಚ್ಚಾಯಿತು.

ಆಗ ಮತ್ತೆ ಮಾತು ಮುಂದುವರಿಸಿದ ಕುಮಾರಸ್ವಾಮಿ, ಅವ್ಯವಹಾರದ ಬಗ್ಗೆ ತನಿಖೆ ಆಗಲೇಬೇಕು. ಸಿಬಿಐ ಆದರೂ ಆಗಲಿ ಸಿಐಡಿ ಆಗಲಿ, ಒಟ್ಟಿನಲ್ಲಿ ತನಿಖೆ ಆಗಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಸರ್ಕಾರ ಏನು ಉತ್ತರ ನೀಡುತ್ತದೆ ಎಂದು ಸಭಾದ್ಯಕ್ಷ ಕಾಗೇರಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು, ಟ್ರಸ್ಟ್‌ನಲ್ಲಿ ಸರ್ಕಾರದ ಅಧಿಕಾರ ಮೊಟಕು ಮಾಡಿಲ್ಲ. ಯಾವುದೇ ಕಾರಣಕ್ಕೂ ಖಾಸಗಿಯವರಿಗೂ ಪರಭಾರೆ ಆಗುವುದಿಲ್ಲ. ಆದರೆ, ಕುಮಾರಸ್ವಾಮಿ ತಮ್ಮ ಸ್ವಾರ್ಥಕ್ಕಾಗಿ ಸರ್ಕಾರಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ತನಿಖೆ ನಡೆಸುವುದಿಲ್ಲ ಎಂದರು.

ಈ ವಿದ್ಯಮಾನಗಳಿಂದ ಕಿರಿಕಿರಿಗೊಂಡ ಸಿದ್ದರಾಮಯ್ಯ ಅವರು, ಶೇ 40 ರ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ಬಯಸದ ಸರ್ಕಾರ ಈ ವಿಷಯದಲ್ಲಿ ಜಗ್ಗಾಟ ಮಾಡುತ್ತಿದೆ, ತಂತ್ರಗಾರಿಕೆ ನಡೆಸಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನೀವು ಯಾವ ಪ್ರಶ್ನೆಗಳನ್ನು ಎತ್ತಿತ್ತೀರೋ ಅದಕ್ಕೆ ಉತ್ತರ ನೀಡಲು ಸಿದ್ಧರಿದ್ದೇವೆ. ಅರ್ಕಾವತಿ ಬಡಾವಣೆಯ ರೀಡೂ, ಸೋಲಾರ್ ಹಗರಣವನ್ನು ನಿಮ್ಮ ಸರ್ಕಾರ ಸಿಬಿಐಗೆ ಏಕೆ ಒಪ್ಪಿಸಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.