ADVERTISEMENT

ದೇವದಾಸಿಯರ ಸಮಸ್ಯೆ: ವರದಿ ಸಿದ್ಧಪಡಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 15:33 IST
Last Updated 28 ಜನವರಿ 2025, 15:33 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ </p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ದೇವದಾಸಿಯರ ಸಮಸ್ಯೆ ಮತ್ತು ಪುನರ್ವಸತಿ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆ ಮಂಗಳವಾರ ನಡೆಯಿತು.  ರಾಯಚೂರಿನ ಅಂಬೇಡ್ಕರ್‌ ವೃತ್ತದಲ್ಲಿ ಮಹಿಳೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ವಿಚಾರವನ್ನು ಸಿದ್ದರಾಮಯ್ಯನವರು ಸಭೆಯಲ್ಲಿ ಪ್ರಸ್ತಾಪಿಸಿದರು.

ADVERTISEMENT

ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಬೇಕು, ದೇವದಾಸಿ ಮಹಿಳೆಯರ ಸ್ಥಿತಿಗತಿ ಬಗ್ಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎನ್ನುವುದು ಪ್ರತಿಭಟನೆ ನಿರತರ ಬೇಡಿಕೆಯಾಗಿದೆ ಎಂದ ಅವರು ಅಧಿಕಾರಿಗಳಿಂದ ಮಾಹಿತಿ ಕೇಳಿದರು.

ಅರಣ್ಯವಾಸಿಗಳ ಒಕ್ಕಲೆಬ್ಬಿಸಬೇಡಿ:

ಅರಣ್ಯವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಸಿದ್ದರಾಮಯ್ಯ ಸೂಚಿಸಿದರು.

ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕುಪತ್ರ ಸಮರ್ಪಕವಾಗಿ ವಿತರಿಸಬೇಕು. ಹಕ್ಕುಪತ್ರ ನೀಡಿದ ಬಳಿಕ ಪಹಣಿಯಲ್ಲಿ ಅವರ ಹೆಸರು ನಮೂದಿಸುವ ಕಾರ್ಯ ತ್ವರಿತಗೊಳಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದು ಹೇಳಿದರು.

ಅರಣ್ಯ ಹಕ್ಕು ಸಮಿತಿ ನಿಗದಿತವಾಗಿ ಸಭೆಗಳನ್ನು ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು. 3,430 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲು ಬಾಕಿ ಇದ್ದು, ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಸಭೆಗೆ ಅಧಿಕಾರಿಗಳು ನೀಡಿರುವ ಅನುಪಾಲನಾ ವರದಿಯಲ್ಲಿ ಮುಂದಿನ ಬಾರಿ ಜಿಲ್ಲಾವಾರು ಅಂಕಿ– ಅಂಶ ನಮೂದಿಸಲು ಅವರು ಸೂಚಿಸಿದರು.

ಸಭೆಯ ಪ್ರಮುಖ ಅಂಶಗಳು:

  • ಬ್ಯಾಕ್‌ಲಾಗ್‌, ನೇಮಕಾತಿ ಮತ್ತು ಮುಂಬಡ್ತಿ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಇಲಾಖಾವಾರು ಸಭೆ ನಡೆಸಬೇಕು 

  • ಮೃತಪಟ್ಟ ಪ್ರಕರಣಗಳಲ್ಲಿ ಅನುಕಂಪ ಆಧಾರದ ಉದ್ಯೋಗಕ್ಕಾಗಿ ಮೃತಪಟ್ಟ ದಿನಾಂಕದಿಂದ ಮೂರು ವರ್ಷದೊಳಗೆ, ಅಪ್ರಾಪ್ತ ವಯಸ್ಸಿನ ಮಕ್ಕಳು 18 ವರ್ಷಗಳನ್ನು ಪೂರೈಸಬೇಕು ಎಂಬ ಮಿತಿ ತೆಗೆದುಹಾಕುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು

  • ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಅಂತಹ ಪ್ರಮಾಣ ಪತ್ರ ನೀಡುವ ಅಧಿಕಾರಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುತ್ತದೆ. ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು

  • ಪೋಕ್ಸೊ ಪ್ರಕರಣಗಳು ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಇದ್ದರೆ ಪ್ರಾಸಿಕ್ಯೂಷನ್‌ ಜತೆ ಚರ್ಚಿಸಿ ಬೇಗ ಇತ್ಯರ್ಥಪಡಿಸಲು, ಶೀಘ್ರ ನ್ಯಾಯದಾನಕ್ಕೆ ಕ್ರಮ ವಹಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.