ADVERTISEMENT

ದೇವಾಂಗ ಸಮುದಾಯವು ಒಂದಾಗಬೇಕು: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 16:29 IST
Last Updated 4 ಜನವರಿ 2026, 16:29 IST
ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ, ಸಂಘದ ಅಧ್ಯಕ್ಷ ಜಿ.ರಮೇಶ್‌, ರಾಜ್ಯಸಭಾ ಸದಸ್ಯ ಕೆ.ನಾರಾಯಣ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆಯಲ್ಲಿ ತೊಡಗಿದ್ದರು. ಹಂಪಿಯ ಹೇಮಕೂಟ ಸಂಸ್ಥಾನದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ, ಸಂಘದ ಅಧ್ಯಕ್ಷ ಜಿ.ರಮೇಶ್‌, ರಾಜ್ಯಸಭಾ ಸದಸ್ಯ ಕೆ.ನಾರಾಯಣ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆಯಲ್ಲಿ ತೊಡಗಿದ್ದರು. ಹಂಪಿಯ ಹೇಮಕೂಟ ಸಂಸ್ಥಾನದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶ್ರೀಮಂತ ಪರಂಪರೆ ಹೊಂದಿರುವ ದೇವಾಂಗ ಸಮುದಾಯವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ದೇವಾಂಗ ಸಮುದಾಯದವರು ಸಂಘಟಿತರಾದರಷ್ಟೇ ಹಿಂದುಳಿದಿರುವಿಕೆಯಿಂದ ಹೊರಬರಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇವಾಂಗ ಸಂಘ ಶತಮಾನೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದುಳಿದ ಸಮುದಾಯದವರು ಒಂದಾಗುವುದು ಜಾತೀಯತೆ ಎನಿಸಿಕೊಳ್ಳುವುದಿಲ್ಲ. ಅಂತಹ ಸಮುದಾಯಗಳು ಉಪಜಾತಿಗಳ ಹೆಸರಿನಲ್ಲಿ ವಿಭಜನೆಯಾಗದೆ, ಒಂದಾಗಬೇಕಾದ ತುರ್ತು ಇದೆ’ ಎಂದರು.

‘ಆಹಾರ ಪೂರೈಸುವ ರೈತರು ಎಷ್ಟು ಮುಖ್ಯವೋ, ಬಟ್ಟೆ ಒದಗಿಸುವ ನೇಕಾರರೂ ಅಷ್ಟೇ ಮುಖ್ಯ. ಅಂತಹ ಒಂದು ಸಮುದಾಯ ಶಿಕ್ಷಣದಿಂದ ವಂಚಿತವಾಗಿರುವುದರಿಂದ ಹಿಂದುಳಿದಿದೆ. ಹೀಗಾಗಿ ಶಿಕ್ಷಣ ಪಡೆದುಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಬೇಕೆಂದರೆ ಸಂಘಟಿತರಾಗಬೇಕು’ ಎಂದು ಕರೆ ನೀಡಿದರು.

ADVERTISEMENT

‘ತಮ್ಮ ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ದೇವಾಂಗ ಸಂಘವು ಶ್ರಮಿಸುತ್ತಿದೆ. ಶಿಕ್ಷಣ ಮತ್ತು ವಿದ್ಯಾರ್ಥಿ ನಿಲಯದ ಸವಲತ್ತನ್ನು ಒದಗಿಸುತ್ತಿದೆ. ಈ ಸಮುದಾಯದ ದುಡಿಯುವ ಮಹಿಳೆಯರಿಗೆ ವಸತಿ ನಿಲಯ ನಿರ್ಮಿಸಿಕೊಡಬೇಕು ಮತ್ತು ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಗಳಿವೆ. ಆ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

‘2004–05 ರಲ್ಲಿ ಹಣಕಾಸು ಸಚಿವನಾಗಿದ್ದಾಗ ನೇಕಾರರಿಗೆ ತಲಾ ಯುನಿಟ್‌ ವಿದ್ಯುತ್‌ಗೆ ₹4.20 ಶುಲ್ಕ ವಿಧಿಸಲಾಗುತ್ತಿತ್ತು. ನಾನು ಅದನ್ನು ₹1.20ಕ್ಕೆ ಇಳಿಸಿದ್ದೆ. ಅದರಿಂದ ಬಹಳಷ್ಟು ನೇಕಾರರಿಗೆ ಅನುಕೂಲವಾಗಿತ್ತು. ಈಗ 20 ಎಚ್‌ಪಿವರೆಗೆ ರಿಯಾಯತಿ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದೆ. ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷದವರೆಗೆ ಸಾಲ ಒದಗಿಸಲಾಗುತ್ತಿದೆ. ನೇಕಾರ ಸಮ್ಮಾನ ಯೋಜನೆ ಇದೆ. ಈ ಎಲ್ಲ ಯೋಜನೆಗಳ ಪ್ರಯೋಜನವನ್ನು ಸಮುದಾಯದವರು ಪಡೆದುಕೊಳ್ಳಬೇಕು’ ಎಂದರು.

ಕೀಳರಿಮೆಯಿಂದ ಹೊರಬನ್ನಿ: ಡಿಕೆಶಿ

‘ದೇವಾಂಗ ಸಮುದಾಯವು ತಾವು ಹಿಂದುಳಿದವರು ಎಂಬ ಕೀಳರಿಮೆಯಿಂದ ಹೊರಗೆ ಬರಬೇಕಿದೆ. ಹಿಂದುಳಿದ ವರ್ಗಗಳ ಸಹಾಯವಿಲ್ಲದೆ ಸಮಾಜ ಮುನ್ನಡೆಯುವುದಿಲ್ಲ. ಕೀಳರಿಮೆಯಿಂದ ಹೊರಬಂದರಷ್ಟೇ ಸಮುದಾಯವು ಅಭಿವೃದ್ಧಿ ಹೊಂದುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು.

‘ನಿಮ್ಮ ಸಮುದಾಯದ ಯುವಜನರು ಶಿಕ್ಷಣ ಪಡೆದುಕೊಳ್ಳುವುದರ ಜತೆಗೆ ಕುಲ ಕಸುಬನ್ನೂ ಬೆಳೆಸಬೇಕು. ಮಾರುಕಟ್ಟೆಯಲ್ಲಿ ಲಭ್ಯವಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಳೆಯಬೇಕು. ಬಟ್ಟೆ ಉತ್ಪಾದನೆ ಮಾಡುವ ಅನೇಕ ಕಾರ್ಪೊರೇಟ್‌ ಕಂಪನಿಗಳಿದ್ದು ನಿಮಗೆ ಸ್ಪರ್ಧೆ ಒಡ್ಡುತ್ತಿವೆ. ಆದರೆ ನಿಮ್ಮ ಬಳಿ ಅನುಭವ ಶ್ರಮ ಮತ್ತು ಕೌಶಲವಿದ್ದು ಅವುಗಳ ಜತೆಗೆ ತಂತ್ರಜ್ಞಾನ ಬಳಸಿಕೊಂಡು ಸ್ಪರ್ಧೆಯನ್ನು ಗೆಲ್ಲಬೇಕು’ ಎಂದರು. ‘ಸಂಘದ ವಿವಿಧ ಕಾರ್ಯಗಳಿಗೆ ಬೆಂಗಳೂರಿನಲ್ಲಿ ಜಾಗ ಬೇಕಾಗಿದೆ ಎಂದು ಕೋರಿದ್ದೀರಿ. ಬಿಡಿಎ ಮೂಲಕ ನಾಗರಿಕ ಬಳಕೆ (ಸಿಎ) ನಿವೇಶನ ಕೊಡಿಸುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.