ADVERTISEMENT

ಅಸಮಾನತೆ ಹುಚ್ಚು ಕುದುರೆಯಂತೆ ಓಡುತ್ತಿದೆ: ದೇವನೂರ ಮಹಾದೇವ ಟೀಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 18:38 IST
Last Updated 14 ಏಪ್ರಿಲ್ 2022, 18:38 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಮೈಸೂರು: ‘ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯ ಹುಚ್ಚು ಕುದುರೆಯನ್ನು ದ್ವೇಷ, ಅಸಹನೆ, ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ’‌ ಎಂದು ಲೇಖಕ ದೇವನೂರ ಮಹಾದೇವ ಟೀಕಿಸಿದರು.

ಭಾರತೀಯ ಪರಿವರ್ತನ ಸಂಘವು ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ನಗರದ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಆಯೋಜಿಸಿದ್ದ ‘ಸಮಾನತೆಗಾಗಿ ಓಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾಜಿ ಆಟಗಾರ, ಹಾಲಿ ಕೋಚ್‌ ನಂತೆ ಉಡುಪು ಧರಿಸಿ ಓಟಕ್ಕೆ ಚಾಲನೆ ನೀಡಿದ್ದೇನೆ. ಕ್ಷಮೆ ಇರಲಿ. ನಾನು ಎಂದೂ ಓಡಿದವನಲ್ಲ. ನಿಮ್ಮೊಡನೆ ಅಥವಾ ನಿಮ್ಮ ಹಿಂದೆಯಾದರೂ ಓಡುವ ಚೈತನ್ಯ ನನಗಿಲ್ಲ. ಓಡುತ್ತಿರುವ ಎಳೆಯರ ಬೆನ್ನು ತಟ್ಟಲು ಬಂದಿದ್ದೇನೆ. ಏಕೆಂದರೆ ನೀವು ಓಡುತ್ತಿರುವುದು ಸಮಾನತೆಗಾಗಿ‌’ ಎಂದರು.

ADVERTISEMENT

‘ಎಳೆಯ ಸ್ನೇಹಿತರೆ, ನೀವು ತುಂಬಾ ವೇಗವಾಗಿ ಓಡಬೇಕಾಗಿದೆ. ಏಕೆಂದರೆ ಇಂದು ಅಸಮಾನತೆ ಹಿಂದೆಂದೂ ಇಲ್ಲದಷ್ಟು ಹುಚ್ಚು ಕುದುರೆಯಂತೆ ಓಡುತ್ತಿದೆ. ಈಗಾಗಲೇ ಅದು ತುಂಬಾ ದೂರ ಓಡಿದೆ. ಆದರಿಂದ ಕಚ್ಚಿಸಿಕೊಳ್ಳದೆ ನೀವು ಎಚ್ಚರ ವಹಿಸಿ ಓಡಬೇಕಾಗಿದೆ. ನೀವು ಎಳೆಯರಾದ್ದರಿಂದ ಗೆಲ್ಲುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಗೆಲ್ಲಲೇ ಬೇಕು’ ಎಂದು ನುಡಿದರು.

‘ಈ ದೇಶಕ್ಕೆ ದಿಕ್ಕು ತೋರಿಸುತ್ತಿರುವ ಚಿಂತಕ, ಹೋರಾಟಗಾರ ಯೋಗೇಂದ್ರ ಯಾದವ್ ಈಚೆಗೆ ಮೈಸೂರಿಗೆ ಬಂದಿದ್ದಾಗ ಒಂದು ನುಡಿಗಟ್ಟು ಹೇಳಿದ್ದರು. ಪ್ರಧಾನಿ ಮೋದಿ ಅವರ ಬಾಯಲ್ಲಿ ಸೀತಾ ಪತಿ ಅಂದರೆ- ರಾಮ, ಹೃದಯದಲ್ಲಿ ನೀತಾ ಅಂದರೆ- ಅಂಬಾನಿ ಇದ್ದಾರೆ‌. ಮೋದಿ ಹೃದಯದಲ್ಲಿರುವ ಅಂಬಾನಿ ಲಕ್ಷಾಂತರ ಕೋಟಿ ರೂಪಾಯಿ ಒಡೆಯ. ಭಾರತದಲ್ಲಿರುವ ಇಂಥ ಹಲವು ಕುಟುಂಬಗಳ ಸಂಪತ್ತು ಒಟ್ಟಾದರೆ ಅದು ದೇಶದ ಒಟ್ಟು ಸಂಪತ್ತಿನ ಅರ್ಧಭಾಗದಷ್ಟು ಆಗುತ್ತದಂತೆ. ಬಡವರ ಸಂಖ್ಯೆ ದಿನವೂ ಹೆಚ್ಚುತ್ತಿದೆ. ಇಷ್ಟೊಂದು ಅಸಮಾನತೆ ಈಗ ದೇಶದಲ್ಲಿದೆ‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.