ಬೆಂಗಳೂರು: ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಜಿಡಿಎಸ್ ಮಹಿಳಾ ಘಟಕದ ಸಮಾವೇಶವನ್ನು ಆಯೋಜಿಸಲಾಗುತ್ತದೆ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಖಿಲ್ ಕುಮಾರಸ್ವಾಮಿ ಅವರು ನಡೆಸಿದ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿದೆ. ಆದರೆ ಅಷ್ಟು ಸಾಲದು. ನಮ್ಮ ಶಕ್ತಿ ಎಷ್ಟು ಇದೆ ಎಂಬುದನ್ನು ತೋರಿಸಬೇಕಿದೆ’ ಎಂದರು.
‘ಮಹಿಳಾ ಘಕಟದ ವತಿಯಿಂದ ಸಮಾವೇಶದಲ್ಲಿ 50,000ದಿಂದ 60,000 ಜನರನ್ನು ಸೇರಿಸಲಾಗುತ್ತದೆ. ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗೆ ನಡೆಯಲಿರುವ ಚುನಾವಣೆಗೆ ಇದರಿಂದ ನೆರವಾಗಲಿದೆ. ಜಿಬಿಎಗೆ ನಡೆಯಿರುವ ಚುನಾವಣೆಯಲ್ಲ ನಮ್ಮ ಪಕ್ಷವು 50–60 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.
‘ಯಾವುದೇ ಚುನಾವಣೆ ಇರಲಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆತಂಕ ಬೇಡ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.ಆದರೆ ಯಾವೆಲ್ಲಾ ಪರಿಹಾರ ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. 48 ಗಂಟೆಗಳಲ್ಲಿ ಆ ಮಾಹಿತಿ ಬಹಿರಂಗಪಡಿಸಬೇಕು’ ಎಂದರು.
‘ಮೂರು ಅಥವಾ ನಾಲ್ಕು ದಿನಗಳ ನಂತರ ನಾನೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಾಧ್ಯವಿರುವ ಕಡೆಯಲ್ಲಿ ರಸ್ತೆ ಮೂಲಕವೇ ಪ್ರವಾಸ ಕೈಗೊಳ್ಳುತ್ತೇನೆ. ನಷ್ಟದ ಪ್ರಮಾಣ, ಪರಿಹಾರ ಸಿಕ್ಕಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ವರದಿ ಸಿದ್ಧಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಿಸುತ್ತೇನೆ’ ಎಂದರು.
ಕೇಂದ್ರ ಸರ್ಕಾರವು ನೆರೆ ಪೀಡಿತ ಇತರ ರಾಜ್ಯಗಳಿಗೆ ಪರಿಹಾರ ಘೋಷಿಸಿದೆ. ಕರ್ನಾಟಕಕ್ಕೆ ಘೋಷಿಸಿಲ್ಲ. ಈ ಬಗ್ಗೆ ಪ್ರಧಾನಿ ಅವರ ಬಳಿ ಮಾತನಾಡುತ್ತೀರಾ ಎಂದು ಪ್ರಶ್ನಿಸಿದಾಗ, ‘ಈ ಬಗ್ಗೆ ರಾಜಕೀಯ ಮಾತನಾಡಲು ಬಯಸುವುದಿಲ್ಲ’ ಎಂದರು.
‘ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿರುವ ಕಾರಣ, ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸಲು ಹಣವಿಲ್ಲ ಎಂದು ಆ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ’ ಎಂದರು.
ತಮ್ಮನ್ನು ಜೈಲಿಗೆ ಕಳುಹಿಸಲು ದೇವೇಗೌಡ ಅವರ ಕುಟುಂಬ ಪ್ರಯತ್ನಿಸುತ್ತಲೇ ಇದೆ ಎಂದು ಡಿ.ಕೆ.ಶಿವಕುಮಾರ್ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ಆ ವ್ಯಕ್ತಿ ಮತ್ತು ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.