ADVERTISEMENT

ರಾಜ್ಯಸಭೆ ಚುನಾವಣೆ: ಗೌಡರ ಯತ್ನ ನಿಷ್ಫಲ– ಖರ್ಗೆಗೆ ಸಿಗದ ಬೆಂಬಲ

ಸುದ್ದಿ ವಿಶ್ಲೇಷಣೆ

ವೈ.ಗ.ಜಗದೀಶ್‌
Published 3 ಜೂನ್ 2022, 20:24 IST
Last Updated 3 ಜೂನ್ 2022, 20:24 IST
ದೇವೇಗೌಡ
ದೇವೇಗೌಡ   

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹೂಡಿದ್ದ ತಂತ್ರಗಾರಿಕೆ ಫಲ ಕೊಟ್ಟಿಲ್ಲ. ಕಾಂಗ್ರೆಸ್‌ತನ ಉಳಿಸಿಕೊಳ್ಳುವ ಜತೆಗೆ ತಮಗೆ ಸಂಕಟ ತಂದೊಡ್ಡಬಹುದಾದ ‘ದಳ’ಪತಿಯ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಲು ಪ್ರತಿತಂತ್ರ ಹೂಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೋಡಿ, ಮೊದಲ ‘ಜಂಟಿ’ ಯತ್ನದಲ್ಲಿ ಗೆದ್ದಿದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಭವಿಷ್ಯದ ‘ರಾಜೀಸೂತ್ರ’ ಮುಂದಿಟ್ಟಿದ್ದ ದೇವೇಗೌಡರು, ಕಾಂಗ್ರೆಸ್‌ನ ಹೆಚ್ಚುವರಿ ಮತಗಳನ್ನು ತಮ್ಮ ಅಭ್ಯರ್ಥಿಗೆ ಕೊಡಿಸಿ ಎಂಬ ಬೇಡಿಕೆ ಮಂಡಿಸಿದ್ದರು. ‘ಕಾಂಗ್ರೆಸ್‌ನ ಎರಡನೇ ಅಧಿಕೃತ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಕಣದಿಂದ ಹಿಂದೆ ಸರಿಸಿ, ಕುಪೆಂದ್ರ ರೆಡ್ಡಿಗೆ ‘ಕೈ’ ಮತ ಹಾಕಿಸುವುದು ಗೌಡರ ಲೆಕ್ಕಾಚಾರ. ಗೌಡರು ಬಿತ್ತಿದ ‘ಮುಂದಾಲೋಚನೆ’ಯ ಕನಸು ಬೆನ್ನೇರಿ ದೆಹಲಿಯ ವಿಮಾನ ಹತ್ತಿದ ಖರ್ಗೆ ಅವರು ಒಂದು ಸುತ್ತಿನ ಕಾರ್ಯಾಚರಣೆಗೆ ಮುಂದಡಿ ಇಟ್ಟರು. ‘ವಿಧಾನಸಭೆ ಚುನಾವಣೆಗೆ 11 ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ಪಕ್ಷಕ್ಕೆ ಮುಳುವಾಗುತ್ತದೆ; ರಾಜ್ಯಸಭೆಯಲ್ಲಿ ದಳದ ಬಲ ಹೆಚ್ಚಾಗುವುದರಿಂದ ನಮಗೇನೂ ಲಾಭವಿಲ್ಲ’ ಎಂಬ ವಾದ ಮುಂದಿಟ್ಟ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌, ಬೆಂಗಳೂರಿನಲ್ಲಿ ಮತ್ತೊಂದು ಕಾರ್ಯಾಚರಣೆ ಶುರುವಿಟ್ಟರು.

‌ಬೆಂಗಳೂರಿನಲ್ಲಿ ನಡೆಯುತ್ತಿದ್ದ ಚಿಂತನಾ ಶಿಬಿರದಲ್ಲಿ ತಮ್ಮೆಲ್ಲ ಭಿನ್ನಾಭಿಪ್ರಾಯ ಮರೆತ ಇಬ್ಬರು ನಾಯಕರು, ರಹಸ್ಯ ಸಭೆ ನಡೆಸಿ ಕಾರ್ಯತಂತ್ರ ಹೆಣೆದರು. ಇಲ್ಲಿಯೇ ವಾಸ್ತವ್ಯ ಹೂಡಿರುವ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜತೆ ಮಾತುಕತೆ ನಡೆಸಿ, ದೆಹಲಿಗೆ ತಮ್ಮ ಸ್ಪಷ್ಟ ಸಂದೇಶ ರವಾನಿಸಿದರು. ಖರ್ಗೆ ಅವರು ದೆಹಲಿಗೆ ಹೋಗಿ ಇಳಿಯುವಷ್ಟರಲ್ಲೇ ಆ ಪಕ್ಷದ ವರಿಷ್ಠರಿಗೆ ‘ಗೌಡರ ತಂತ್ರ’ ಗೊತ್ತಾಗಿಬಿಟ್ಟಿತು. ಹಾಗಾಗಿ, ಖರ್ಗೆಯವರು, ಯತ್ನಕ್ಕೆ ಫಲ ಸಿಗದೇ ‘ದಂಡ’ಯಾತ್ರೆಯಿಂದ ವಾಪಸ್‌ ಬೆಂಗಳೂರಿಗೆ ಮರಳಿಬಿಟ್ಟರು.

ADVERTISEMENT

ಲೆಕ್ಕಾಚಾರವೇನು?: ಚುನಾವಣೆ ಎದುರುಗೊಳ್ಳುವ ಹೊತ್ತಿನೊಳಗೆ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿ ಸಿದರೆ ಬಿಜೆಪಿಯವರ ಟೀಕೆಗೆ ಗುರಿಯಾಗಬೇಕಾಗುತ್ತದೆ. ಜತೆಗೆ, ಜೆಡಿಎಸ್‌ಗೆ ಪ್ರತಿದಾಳವಾಗಿ ಕಣಕ್ಕೆ ಇಳಿಸಿರುವ ಮನ್ಸೂರ್ ಅಲಿ ಖಾನ್‌ ಅವರಿಂದ ನಾಮಪತ್ರ ವಾಪಸ್ ತೆಗೆಸಿದರೆ ತಮ್ಮ ಮತಬ್ಯಾಂಕ್‌ ಆಗಿರುವ ಮುಸ್ಲಿಂ ಸಮುದಾಯದವರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಮನ್ಸೂರ್ ಸೋತರೂ ಪರವಾಗಿಲ್ಲ. ‘ನಮ್ಮೆಲ್ಲ ಸದಸ್ಯ ಬಲವನ್ನು ಒಗ್ಗೂಡಿಸಿ ಗೆಲ್ಲಿಸಲು ಯತ್ನಿಸುವುದು;ಜತೆಗೆ, ಜೆಡಿಎಸ್‌ ನಾಯಕತ್ವದ ಬಗ್ಗೆ ಅಸಮಾಧಾನಗೊಂಡು ಒಂದು ಕಾಲು ಹೊರಗಿಟ್ಟಿರುವ ಐದಾರು ಶಾಸಕರ ಮತಗಳನ್ನು ಸೆಳೆದು, ಮನ್ಸೂರ್‌ ಗೆಲ್ಲಿಸಿಕೊಳ್ಳುವತ್ತ ಶ್ರಮ ಹಾಕೋಣ. ಸಾಧ್ಯವಾಗದೇ ಇದ್ದರೆ ಜೆಡಿಎಸ್ ಸಹಕಾರ ಕೊಟ್ಟಿದ್ದರೆ ಗೆಲ್ಲಿಸಲೂ ಸಾಧ್ಯವಿತ್ತು ಎಂಬುದನ್ನು ಮುಂದಿನ ದಿನಗಳಲ್ಲಿ ಬಿಂಬಿಸೋಣ’ ಎನ್ನುವುದು ಕೈ ನಾಯಕರ ಒಳಾಶಯ.

‘ಖರ್ಗೆಯವರ ಅಭಿಲಾಷೆಯಂತೆ ಜೆಡಿಎಸ್‌ಗೆ ಬೆಂಬಲ ಕೊಟ್ಟರೂ ಅದರಿಂದೇನೂ ಪ್ರಯೋಜನವಾಗದು. ಮುಂದಿನ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ದಳವೇ ನಮಗೆ ನೇರ ಎದುರಾಳಿ. ಈಗಲೇ ಬೆಂಬಲ ನೀಡಿದರೆ ಪಕ್ಷದ ಮೇಲಿನ ವಿಶ್ವಾಸಕ್ಕೆ ಕುಂದುಂಟಾಗಬಹುದು. ಅದರ ಜತೆಗೆ, ಒಂದು ವೇಳೆ ಬಹುಮತ ಸಿಗದೇ ಇದ್ದರೆ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ನಮ್ಮ ಜತೆ ನಿಲ್ಲದೇ ಬಿಜೆಪಿ ಜತೆಗೆ ಹೋಗುವ ಸಾಧ್ಯತೆಯೇ ಹೆಚ್ಚಿದೆ. ಈ ಚುನಾವಣೆಗೆ ಸೀಮಿತವಾಗಿ ಗೌಡರು ಹೆಣೆದಿರುವ ಸೂತ್ರವನ್ನು ಒಪ್ಪುವುದು ಬೇಡ’ ಎಂಬುದು ಕೈ ನಾಯಕರ ಪ್ರತಿಪಾದನೆಯಾಗಿತ್ತು. ಹೀಗಾಗಿ, ಖರ್ಗೆಯವರ ಯತ್ನ ಫಲ ಕೊಡಲಿಲ್ಲ.

ಬಿಜೆಪಿ ಲೆಕ್ಕ: ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಹೆಚ್ಚಿಗೆ ಉಳಿಯುವ ಮತಗಳನ್ನು ಮೂರನೇ ಅಭ್ಯರ್ಥಿ ಲಹರ್ ಸಿಂಗ್ ಅವರಿಗೆ ಹಾಕಿಸುವುದು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಬರುವತ್ತ ಒಲವು ಹೊಂದಿರುವ ಶಾಸಕರನ್ನು ಸೆಳೆದು ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಅಡ್ಡ ಮತದಾನ: ಯಶಸ್ಸು ಯಾರಿಗೆ?

ಕರ್ನಾಟಕದ ವಿಧಾನಸಭೆ ಸದಸ್ಯರಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ನಟ ಜಗ್ಗೇಶ್‌, ಲಹರ್‌ ಸಿಂಗ್ ಸಿರೋಯ, ಕಾಂಗ್ರೆಸ್‌ನಿಂದ ಜೈರಾಂ ರಮೇಶ್‌, ಮನ್ಸೂರ್‌ ಅಲಿ ಖಾನ್‌ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಗೆ ಎರಡು, ಕಾಂಗ್ರೆಸ್‌ಗೆ ಒಂದು ಅಭ್ಯರ್ಥಿ ಗೆಲ್ಲಿಸಿಕೊಳ್ಳುವಷ್ಟು ಪೂರ್ಣ ಮತಗಳಿವೆ. ಹೆಚ್ಚುವರಿಯಾಗಿ ನಿಲ್ಲಿಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಾದರೆ ಅನ್ಯಪಕ್ಷದ ಸದಸ್ಯರ ‘ಅಡ್ಡಮತದಾನ’ದ ಮೊರೆಹೋಗಬೇಕಾಗುತ್ತದೆ. ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸದಸ್ಯ ಬಲವಿಲ್ಲ. ಹೀಗಾಗಿ, ಅಡ್ಡಮತದಾನ ಮಾಡಿಸುವಲ್ಲಿ ಯಾರು ಯಶಸ್ಸು ಪಡೆಯಲಿದ್ದಾರೆ ಎಂಬುದೀಗ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.